Product Description
ಮಾನವ ಜಗತ್ತಿನಲ್ಲಿ ಮೊಟ್ಟ ಮೊದಲಿದ್ದುದು ಮಾನವ ಜೀವನಧರ್ಮ ಮಾತ್ರ ಅದು ಆಗ ಇದ್ದಂತೆ ಈಗ ಇಲ್ಲ. ಯಾಕೆಂದರೆ, ಜೀವನಧರ್ಮ ಮತಧರ್ಮದಂತೆ ಸ್ಥಾವರವಲ್ಲ. ಜೀವನಧರ್ಮ ಜಂಗಮ, ಚಲನಶೀಲ. ಕಾಲದ ಜೊತೆಯಲ್ಲಿ ಬದಲಾಗುತ್ತಿರುವಂಥದು. ಹುಟ್ಟಿನಲ್ಲಿ ಯಾರೂ ಏನೂ ಆಗಿರುವುದಿಲ್ಲ. ಬುದ್ಧ, ಮಹಾವೀರ, ಯೇಸು, ಮಹಮ್ಮದ ಪೈಗಂಬರ್, ನಾನಕ ಎಲ್ಲರೂ ಹುಟ್ಟಿದ್ದು ಕೇವಲ ಮನುಷ್ಯರಾಗಿ. ಮತ ಹುಟ್ಟಿದ್ದು ಬಹಳ ಕಾಲದ ಮೇಲೆ. ಮತ ಬೆಳೆದದ್ದು ಮತದ ಹುಟ್ಟಿಗೆ ಕಾರಣವಾದವನು ಕಾಲವಾದ ಬಳಿಕ. ಹಾಗೆಯೇ ಯಾವ ಮನುಷ್ಯನಿಗೂ ಹುಟ್ಟಿನಲ್ಲಿಯೇ ಜಾತಿ, ಮತ ಎನ್ನುವುದಿರುವುದಿಲ್ಲ. ಬದುಕಿನಲ್ಲಿ ಅಂಥ ಯಾವ ಗುರುತಿಸುವಿಕೆಯೂ ಸತ್-ಜೀವನಧರ್ಮಕ್ಕೆ, ಸಜ್ಜನಿಕೆಗೆ, ಸನ್ಮಾರ್ಗಕ್ಕೆ ಅನಿವಾರ್ಯವಲ್ಲ. ಅಷ್ಟೇ ಏಕೆ, ಯಾರು ಯಾರ ಮಗ ಅಥವಾ ಮಗಳು ಎನ್ನುವುದು ಕೂಡ ಮುಖ್ಯವಾಗುವುದಿಲ್ಲ. ವ್ಯಕ್ತಿ ಯಾವುದೇ ಮತ ಅಥವಾ ಪಂಥದ ಸೊತ್ತಲ್ಲ. ಅವನು ಒಂದು ಸ್ವತಂತ್ರ ಘಟಕ. ಮನುಷ್ಯನನ್ನು ಗುರುತಿಸಬೇಕಾದ್ದು ಅವನ ಮಾನವೀಯತೆಯ ಮೂಲ ಮಾತ್ರ, ಮತ್ತು ಇದನ್ನು ಗುರುತಿಸುವ ಸಾಧನ ಕೂಡ ಮಾನವೀಯತೆಯೇ. ಎರಡೂವರೆ ದಶಕಗಳ ಹಿಂದೆ ಈ ಚಿಂತನೆಗಳ ನೆಲೆಗಟ್ಟಿನಲ್ಲಿ ಬರೆಯಲಾದ ಈ ಕಾದಂಬರಿಯ ವಸ್ತು ಇವತ್ತಿಗೂ ಪ್ರಸ್ತುತ. ಪಾತ್ರಗಳು ಕೂಡ ಅಷ್ಟೇ ಜೀವಂತ.