Quantity
Product Description
ಇವನು ಗೆಳೆಯನಲ್ಲ..!ನನ್ನದೇ ಆಗಿದ್ದ ಅದೊಂದು ಕಾಲವಿತ್ತು. ಕನ್ನಡದ ದಿನಪತ್ರಿಕೆಗಳು ದೀಪಾವಳಿಗೋ, ಯುಗಾದಿಗೋ ನಡೆಸುತ್ತಿದ್ದ ಕಥಾ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಪಡೆದುಕೊಂಡ ಸಣ್ಣ ಕತೆಗಳನ್ನು ಹುಡುಕಿಕೊಂಡು ಓದುತ್ತಿದ್ದ ಕಾಲ ಅದು. ಅಂತಹಾ ಕಥಾ ಸ್ಪರ್ಧೆಗಳಲ್ಲಿ ಪ್ರಥಮವೋ, ದ್ವಿತೀಯವೋ ಬಹುಮಾನ ಗೆದ್ದ ಕತೆಗಳ ಜೊತೆಯಲ್ಲಿ ಅದನ್ನು ಬರೆದವರ ಹೆಸರುಗಳೂ ಕೆಲಕಾಲ ನೆನಪಿನಲ್ಲಿ ಉಳಿಯುತ್ತಿದ್ದವು. ಆದರೆ, ಅಂತಹ ಯಾವುದೇ ಕಥಾಸ್ಪರ್ಧೆಯಲ್ಲಿ ಬಹುಮಾನ ಪಡೆಯದೆಯೂ, ನೆನಪಿನಲ್ಲಿ ಉಳಿದಿರುವ ಕೆಲವೇ ಹೊಸಬರ ಹೆಸರುಗಳಲ್ಲಿ ಪಕ್ಕನೆ ನೆನಪಾಗುವ ಒಂದು ಅಪರೂಪದ ಹೆಸರು ಈ ‘ಹೃದಯಶಿವ’. ಅದಕ್ಕೆ ಕಾರಣ, ಕನ್ನಡ ಚಿತ್ರಲೋಕವನ್ನೇ ನಿದ್ರೆಯಿಂದ ಎಬ್ಬಿಸಿದ್ದ ‘ಮುಂಗಾರು ಮಳೆ’ ಸಿನಿಮಾದ – ‘ಇವನು ಗೆಳೆಯನಲ್ಲ...’ ಎಂಬ ಹಾಡಿನ ಎದೆ ಕಲಕಿದ್ದ, ಕಣ್ಣಂಚು ತೋಯಿಸಿದ್ದ ನಾಲ್ಕು ಸಾಲುಗಳು.
ಈ ಸಂಕಲನದ ಎಲ್ಲ ಹದಿನೈದು ಕತೆಗಳ ಮೂಲವನ್ನು ಕೆದಕಲು ನಾನು ಇಳಿಯುವುದಿಲ್ಲ. ಇಲ್ಲಿನ ಬಹುಪಾಲು ಕತೆಗಳು ಗ್ರಾಮೀಣ ಹಿನ್ನೆಲೆಯವು. ಬಳಸಿದ ಭಾಷೆಯೂ ಅದೇ ಗುಂಪಿನದ್ದು. ‘ಒಂದೂರಲ್ಲಿ ಒಬ್ಬ ಗೌಡ ಇದ್ದನಂತೆ, ಆ ಗೌಡನಿಗೆ ಒಬ್ಬಳೇ ಹೆಂಡ್ರು ಅಂತೆ. ಅವಳನ್ನು ಕಂಡ್ರೆ ಗೌಡನಿಗೆ ಬೋ ಪ್ರೀತಿಯಂತೆ...’ ಈ ಬಗೆಯ, ಯಾರನ್ನೂ ಕೆಣಕದ ಸರಳ ಧಾಟಿಯ ಭಾಷೆಯ ಬಳಕೆಯೇ ಹೆಚ್ಚು. ಇಂದಿನ ಗ್ರಾಮೀಣ ಹಿನ್ನೆಲೆಯ ಕತೆಗಳೆಂದರೆ, ನಮ್ಮ ಸುತ್ತಲ ಬದುಕಿನಲ್ಲಿ ಓದುಗರು ಕಾಣುವ ಮತ್ತು ಕಾಣಬಯಸುವ ಜಾತಿ-ಧರ್ಮಗಳ ಸರಸ-ವಿರಸ, ಸಂಬಂಧ-ಸಂಘರ್ಷಗಳಲ್ಲಿ ನಿರೂಪಕನಿಗೆ ಆಸಕ್ತಿಯಿದ್ದಂತಿಲ್ಲ. ಈ ಸಂಕಲನದ, ‘ಸೂಪರ್ ಗಾಡ್ ಸಣ್ಣಯ್ಯ’ದಲ್ಲಿರುವ ಕತೆಗಳೂ ನನ್ನ ಈ ಮಾತಿಗೆ ಮತ್ತೊಂದು ಸಾಕ್ಷಿ. ಎಲ್ಲ ಜಾತಿ-ಧರ್ಮಗಳ ಗೊಂದಲಗಳನ್ನೂ ಕೆಣಕಲು ಸಾಕಷ್ಟು ಕೆಸರುಗುಂಡಿಗಳುಳ್ಳ ಈ ಸಂಕಲನದ ಬಹುಪಾಲು ಕತೆಗಳು ಬೆಳೆಯುತ್ತಾ ಹೋದಂತೆ, ಅನಿರೀಕ್ಷಿತ ಘಟನೆಯೊಂದು ಘಟಿಸಿಯೇಬಿಡುತ್ತದೆ ಎಂಬ ಅನುಮಾನದ ಮೂಲಕ ಸಾಮಾನ್ಯ ಓದುಗನನ್ನು ಕೆರಳಿಸುತ್ತಲೇ, ಓದುಗನ ನಿರೀಕ್ಷೆಯನ್ನು ಸುಳ್ಳು ಮಾಡುವ ಮೂಲಕ ಗೆದ್ದುಬಿಡುತ್ತವೆ. ‘ಹೃದಯಶಿವ’ ಅವರ ಕತೆಗಳ ಒಳಗುಟ್ಟುಗಳನ್ನು ಓದಿಯೇ ಅಸ್ವಾದಿಸಬೇಕು.
ಮುಖ್ಯವಾಗಿ, ಸಿನಿಮಾ ಮಾಧ್ಯಮದ ಹಲವು ವಿಭಾಗಗಳಲ್ಲಿ ಪಳಗಿರುವ ಈ ಕೆ ಎಂ ಶಿವಣ್ಣ-ಯಾನೆ-ಕೆಬ್ಬರೆ ಮಂಚೇಗೌಡ ಶಿವಣ್ಣನೆಂಬ ಈ ಕನ್ನಡದ ಕಂದ, ಕನ್ನಡದ ಓದುಗರೆಲ್ಲರ ‘ಹೃದಯಶಿವ’ನಾಗಲಿ ಹಾಗೂ ‘ಇವನು ಗೆಳೆಯನಲ್ಲ..’ ಎಂಬ ಮಾತು ಬಲು ಬೇಗ ಸುಳ್ಳಾಗಲಿ ಎಂದು ಹಾರೈಸುವೆ.
Binding
Soft Bound
Author
Hrudaya Shiva
Number of Pages
100
Publisher
Harivu Books
Publication Year
2025
Height
1 CMS
Length
22 CMS
Weight
200 GMS
Width
14 CMS
Language
Kannada