Product Description
ಈ ಪುಸ್ತಕದಲ್ಲಿ ಪ್ರಸಿದ್ಧ ಕಾದಂಬರಿಕಾರ, ಶಿಕ್ಷಣತಜ್ಞ ಕೆ.ಟಿ.ಗಟ್ಟಿ ಅವರ ಆಳವಾದ ಅನುಭವಗಳಿಂದ, ಚಿಂತನೆಗಳಿಂದ ಮೂಡಿಬಂದಿರುವ ವಿಚಾರಗಳಿವೆ. ತಾರುಣ್ಯದಲ್ಲಿರುವ ಯುವಕ ಯುವತಿಯರು ತಮ್ಮ ಬದುಕಿನ ಪ್ರಾರಂಭದ ಕಾಲಘಟ್ಟದಲ್ಲಿ ಬುದ್ಧಿ ಭಾವಗಳ ಪೋಷಣೆಯಿಂದ ಉತ್ತಮ ವಿಚಾರಗಳನ್ನು ಮೈಗೂಡಿಸಿಕೊಂಡು, ಅವುಗಳನ್ನು ಮಥಿಸುವಂತಾದರೆ ಅವರಿಗೆ ಬದುಕಿನ ನಿಜವಾದ ಅರ್ಥವನ್ನು ಕುರಿತ ಅರಿವು ಮೂಡುತ್ತದೆ ಎನ್ನುವ ಈ ಲೇಖಕರು ಇಲ್ಲಿನ ೫೦ ವಿಚಾರಪ್ರಚೋದಕ ಲೇಖನಗಳಲ್ಲಿ ಲೋಕಾನುಭವದಿಂದ ಒದಗಿಸಬಹುದಾದ ಪಾಠ, ಮಾತು-ಮೌನಗಳೆಂಬ ಸಂಪತ್ತು, ಚೈತನ್ಯಪೂರ್ಣ ಮನಸ್ಸು, ಆಲಸಿಗಳ ಮತ್ತು ಕ್ರಿಯಾಶಾಲಿಗಳ ನಡುವಣ ವ್ಯತ್ಯಾಸ, ಪೂರ್ಣ ಎಚ್ಚರದ ಧ್ಯಾನ, ಧನಾತ್ಮಕ ಚಿಂತನೆಯ ಫಲ, ಓದಿನ ಮಹತ್ವ, ಏಕಾಂತದ ಅಗತ್ಯ, ದುಶ್ಚಟ ತರುವ ಅಪಾಯ, ಇಂಗ್ಲಿಷ್ ಮಾಧ್ಯಮದ ಮಿತಿ, ಕನ್ನಡ ಭಾಷೆಯ ಚೆಲುವು, ಪತ್ರಿಕೆಗಳು ಜನರ ದನಿಯಾಗಿ ಬೆಳೆಯಬೇಕಾದ ಪರಿ, ಇತ್ಯಾದಿ ವಿಷಯಗಳನ್ನು ಮಂಡಿಸಿದ್ದಾರೆ. ಅನುಭವವೈವಿಧ್ಯ, ತರ್ಕಬದ್ಧ ವಿಚಾರಸರಣಿ, ಮನವೊಲಿಸುವ ಶೈಲಿ, ಇವೆಲ್ಲ ಇರುವ ಈ ಪುಸ್ತಕ ಯುವಜನಾಂಗಕ್ಕೆ ದಾರಿ ತೋರಿಸುವ ಒಂದು ಕೈದೀವಿಗೆಯಂತಿದೆ.