Product Description
ಮಧ್ಯಕಾಲೀನ ಕರ್ನಾಟಕ ಚರಿತ್ರೆಯಲ್ಲಿ ದಲಿತರು ಎನ್ನುವ ಅಧ್ಯಯನ ವಿಷಯವು ಮೇಲ್ನೋಟಕ್ಕೆ ಕಾಣುವಷ್ಟು ಸುಲಭದ್ದಲ್ಲ. ರಾಜಕೀಯ ಮತ್ತು ಧಾರ್ಮಿಕ ಸ್ಥಿತ್ಯಂತರಗಳನ್ನು ಆಧಾರವಾಗಿಟ್ಟುಕೊಂಡು ಚಾರಿತ್ರಿಕ ಬೆಳವಣಿಗೆಯ ಕಾಲಘಟ್ಟ ವಿಂಗಡನೆ ಮಾಡಿದ ಸಾಂಪ್ರದಾಯಿಕ ಚರಿತ್ರೆ ಲೇಖನ ಪರಂಪರೆಯ ಮಿತಿಗಳನ್ನು ಈ ಪ್ರಬಂಧ ಸಮರ್ಥವಾಗಿ ಗುರ್ತಿಸಿದೆ. ದಲಿತಲೋಕದ ಒಟ್ಟು ಗ್ರಹಿಕೆಯನ್ನು ಕೇವಲ ಸಾಮಾಜಿಕ ನೆಲೆಯಲ್ಲಿ ಮಾತ್ರ ನೋಡದೆ ಅರ್ಥವ್ಯವಸ್ಥೆ ಮತ್ತು ರಾಜ್ಯವ್ಯವಸ್ಥೆ ಎಂಬ ಎರಡು ಅಧ್ಯಾಯಗಳು ಈ ಅಧ್ಯಯನಕ್ಕೆ ಒಂದು ಸಮಗ್ರತೆಯನ್ನು ಒದಗಿಸಿವೆ. ಪ್ರಸ್ತುತ ಮಹಾಪ್ರಬಂಧವು ಶಾಸನ, ಸಾಹಿತ್ಯ ಕೃತಿಗಳ, ಜಾನಪದ, ಮೌಖಿಕ ಪರಂಪರೆಯ ಕಾವ್ಯ ಕಥಾನಕಗಳು, ವಿದೇಶಿ ಬರವಣಿಗೆಗಳು ಮತ್ತು ವರ್ತಮಾನದಲ್ಲಿ ಪ್ರಚಲಿತದಲ್ಲಿರುವ ದಲಿತ ಸಮುದಾಯಗಳ ಗತದ ಸಂಗತಿಗಳನ್ನು ಚಾರಿತ್ರಿಕ, ಸಾಹಿತ್ಯಕ, ಜಾನಪದೀಯ, ಸಮಾಜಶಾಸ್ತ್ರೀಯ ಮತ್ತು ಮಾನವಶಾಸ್ತ್ರೀಯ ಅಧ್ಯಯನಗಳಿಂದ ರೂಪಿತವಾಗಿಟ್ಟುಕೊಂಡು ವಿಶ್ಲೇಷಿಸುವ ಸಮರ್ಥ ಪ್ರಯತ್ನವಾಗಿದೆ. ಕರ್ನಾಟಕದ ದಲಿತ ಚರಿತ್ರೆಯನ್ನು ಸಮಗ್ರವಾಗಿ ಗ್ರಹಿಸುವ ನಿಟ್ಟಿನಲ್ಲಿ ಉಳಿದುಹೋಗಿದ್ದ ಒಂದು ಕೊರತೆಯನ್ನು ಪ್ರಸ್ತುತ ಅಧ್ಯಯನ ನೀಗಿಸಿದೆ.