Product Description
ಜನಸಂಘರ್ಷಗಳನ್ನು, ಜನಾಂದೋಲನಗಳನ್ನು ಮತ್ತು ಜನಸಾಮಾನ್ಯರ ಪ್ರಜಾಸತ್ತಾತ್ಮಕ ಹೋರಾಟಗಳನ್ನು ಹೊಸ ರೂಪಗಳಲ್ಲಿ ಕಾಣುತ್ತಿರುವ ಈ ಸಂದರ್ಭದಲ್ಲೇ ಆಳುವ ವರ್ಗಗಳು ಶ್ರಮಿಕ ವರ್ಗಗಳ ಆಶಯಗಳನ್ನು ಚಿವುಟಿ ಹಾಕುವ ನವ ವಿಧಾನಗಳನ್ನು ಅನುಸರಿಸುತ್ತಿರುವುದು ಸಮಕಾಲೀನ ಸಂದರ್ಭದಲ್ಲಿ ಕಾಣಬಹುದಾಗಿದೆ. ಇಂತಿಪ್ಪ ಸನ್ನಿವೇಶದಲ್ಲಿ ಜಾಗತಿಕ ಮಟ್ಟದ ಶ್ರಮಜೀವಿ ವರ್ಗಗಳಿಗೆ ಪ್ರಭುತ್ವದ ವಿರುದ್ಧ ಹೋರಾಡಲು ಒಂದು ಹೊಸ ಆಯಾಮ ಮತ್ತು ಸಂಘರ್ಷದ ಮಾರ್ಗಗಳು ಅನಿವಾರ್ಯ ಎನಿಸುತ್ತದೆ. ಈ ಹೊಸ ಆಯಾಮವನ್ನು ಚೆ ಮತ್ತು ಅವರ ಕ್ರಾಂತಿಕಾರಿ ಪರಂಪರೆ ಒದಗಿಸುವುದನ್ನು ಅಲ್ಲಗಳೆಯಲಾಗುವುದಿಲ್ಲ.
ಪ್ರಸ್ತುತ ಕೃತಿಯಲ್ಲಿ ಕ್ಯಾಸ್ಟ್ರೋ ಅವರ ಸ್ಮೃತಿಪಟಲದಿಂದ ಹೊರಹೊಮ್ಮಿರುವ ಚೆ ಅವರ ಹೆಜ್ಜೆಗಳ ಸದ್ದು ಸಮಕಾಲೀನ ಸಂದರ್ಭದ ಜನಪರ ಸಂಘರ್ಷಗಳಿಗೆ ಮಾರ್ಗದರ್ಶನ ನೀಡುವುದಷ್ಟೇ ಅಲ್ಲದೆ, ಚಾರಿತ್ರಿಕ ಆಯಾಮವನ್ನೂ ಒದಗಿಸುತ್ತದೆ. ನವ ಉದಾರವಾದದ ಪ್ರಹಾರದಿಂದ ತತ್ತರಿಸುತ್ತಿರುವ ಜಗತ್ತಿನ ಶ್ರಮಿಕ ವರ್ಗಗಳಿಗೆ, ಶೋಷಿತ ಜನಸಮುದಾಯಗಳಿಗೆ ಚೆ ಅವರ ಕ್ರಾಂತಿಕಾರಿ ಹೆಜ್ಜೆಗಳು ಎಚ್ಚರಿಕೆಯ ಗೆಜ್ಜೆನಾದಗಳಂತೆ ಪರಿಣಮಿಸುತ್ತವೆ. ಈ ದೃಷ್ಟಿಯಿಂದಲೇ ಪ್ರಸ್ತುತ ಕೃತಿ ಜನಪರ ಹೋರಾಟಗಳಿಗೆ ಅಪ್ಯಾಯಮಾನವಾಗುತ್ತದೆ. ಕ್ರಾಂತಿಯ ಪರಿಕಲ್ಪನೆಯನ್ನು ಹಿಂಸೆ-ಅಹಿಂಸೆಯ ಪರಿಧಿಯಲ್ಲೇ ವಿಶ್ಲೇಷಿಸಲಾಗುತ್ತಿರುವ ಸಮಕಾಲೀನ ಸಂದರ್ಭದಲ್ಲಿ ಚೆ ಅವರ ಕ್ರಾಂತಿಯ ಹೆಜ್ಜೆಗಳನ್ನು ಗುರುತಿಸುವ ಈ ಅಮೂಲ್ಯ ಕೃತಿ ಒಂದು ವಿಭಿನ್ನ ಆಯಾಮವನ್ನು ಒದಗಿಸಬಲ್ಲದು. ಈ ಕೃತಿಯ ಮಹತ್ವವೂ ಇದರಲ್ಲೇ ಅಡಗಿದೆ.