Product Description
ಬುದ್ಧ ಸಮಾನ ಸಮಾಜ ಕಟ್ಟ ಬಯಸಿದ ಭಾರತದ ಮೊದಲ ದಾರ್ಶನಿಕ. ಬುದ್ಧನ ಸೈದ್ಧಾಂತಿಕ ಆಲೋಚನೆಗಳು ಮೂಲತಃ ರಾಜಕೀಯ ನೆಲೆಯಲ್ಲಿ ಹುಟ್ಟಿದವುಗಳಾಗಿವೆ. ಆದರೆ ಸದಾ ಚಲನಶೀಲವಾದ ಬುದ್ಧನ ಚಿಂತನೆಗಳು ದಾರ್ಶನಿಕ ನೆಲೆಯಲ್ಲಿ ಹೆಚ್ಚು ಚರ್ಚೆಗೊಳಪಟ್ಟಿವೆ. ಸಾಮಾಜಿಕ ಅಸಮಾನತೆ ತೊಡೆದುಹಾಕಲು ಸಮಾನ ಬದುಕಿನ ತಾತ್ವಿಕತೆ ರೂಪಿಸಿದ ಬುದ್ದನ ವಿಚಾರಗಳನ್ನು ಆಧುನಿಕ ರಾಜಕೀಯ ಪ್ರಜ್ಞೆಯ ಮೂಲಕ ಚರ್ಚೆಗೊಳಪಡಿಸುವ ಪ್ರಯತ್ನಗಳಾಗಿರಲಿಲ್ಲ. ಕಮ್ಯುನಿಸ್ಟ್ರಾಗಿದ್ದರೂ ಅಂಬೇಡ್ಕರ್, ಫುಲೆ, ಪೆರಿಯಾರ್ರ ಅವರ ವಿಚಾರಗಳ ಪ್ರಭಾವಕ್ಕೊಳಗಾದ ಕಂಚ ಐಲಯ್ಯ ಅವರ ಅಧ್ಯಯನ ದೃಷ್ಟಿ ಬದಲಾದ ಪರಿಣಾಮವಾಗಿ ಬುದ್ಧನ ಚಿಂತನೆಗಳು ಅವರಿಗೆ ರಾಜಕೀಯ ತತ್ವಗಳಾಗಿ ಕಂಡವು. ಆ ಬಗ್ಗೆ ವಿಸ್ತೃತವಾಗಿ ಅವರು ನಡೆಸಿದ ಅಧ್ಯಯನ ಫಲ ಈ ದೇವರ ರಾಜಕೀಯ ತತ್ವ ಪುಸ್ತಕ.
ಇಂದು ಹಿಂದೂ ಧರ್ಮವೆಂದು ಕರೆಯಿಸಿಕೊಳ್ಳುವ ಅಂದಿನ ಬ್ರಾಹ್ಮಣ್ಯದ ಮೂರ್ತ ರೂಪವಾದ ವೈದಿಕಶಾಹಿಯ ಜೊತೆ ನಡೆದ ಸಂಘರ್ಷದಲ್ಲಿಯೇ ರೂಪುಗೊಂಡ ಬೌದ್ಧ ತಾತ್ವಿಕತೆ ಸಮಾನ ಬದುಕಿನ ಸಮಾಜದ ಕಡೆ ಮುಖ ಮಾಡಿದ ಚಿಂತನೆಯಾಗಿದೆ. ಈ ಸಂಘರ್ಷದ ತಲಸ್ಪರ್ಶಿ ಅಧ್ಯಯನ ಮಾಡಿರುವ ಐಲಯ್ಯ ಅವರು ಬೌದ್ಧ ತಾತ್ವಿಕತೆಗಿರುವ ರಾಜಕೀಯ ಸ್ವರೂಪವನ್ನು ಬಿಡಿಸಿಟ್ಟಿದ್ದಾರೆ.