Product Description
ಹೆಂಗಸರಿಗೇ ಮನೋರೋಗ ಹೆಚ್ಚು, ಅಲ್ಲವೇ ಡಾಕ್ಟರೇ. ಅವರದು ದುರ್ಬಲ ಮನಸ್ಸು. ಬೇಗ ಕಾಯಿಲೆಗೆ ತುತ್ತಾಗುತ್ತದೆ ಎಂದು ಹೇಳುವವರಿಗೆ ಕೊರತೆ ಇಲ್ಲ. ಹೆಂಗಸರಲ್ಲವೇ ಬಹು ಬೇಗ ಭಾವೋದ್ವೇಗಕ್ಕೆ ಒಳಗಾಗುತ್ತಾರೆ. ನಾವು ಕೆಮ್ಮಿದ ಹಾಗೆ, ಸೀನುವ ಹಾಗೆ ಅವರು ಉನ್ಮಾದ ಸ್ಥಿತಿಗೆ ಒಳಗಾಗುತ್ತಾರೆ ಎನ್ನುವ ಗಂಡಸರ ಸಂಖ್ಯೆ ಕಡಿಮೆ ಇಲ್ಲ. ಹೆಣ್ಣು ಜನ್ಮ ಬಲು ಪಾಪದ ಜನ್ಮ, ನೊಂದು, ಬೆಂದು ಪಾಡು ಪಡುವ ಜೀವ. ಮಾಡಿದ ಕರ್ಮ ಸವೆಯಬೇಡವೇ ಎನ್ನುವ ವೃದ್ಧೆಯರು ಎಲ್ಲೆಡೆ ಕಾಣಸಿಗುತ್ತಾರೆ. ನೀರಿನಲ್ಲಿ ಮೀನಿನ ಹೆಜ್ಜೆ ಗುರುತಿಸಬಹುದು, ಆದರೆ ಹೆಣ್ಣಿನ ಮನಸ್ಸಿನಲ್ಲಿ ಏನಿದೆ ಎಂದು ತಿಳಿಯುವುದು ಕಷ್ಟ ಎನ್ನುವ ನೆಪ ಒಡ್ಡಿ, ಹೆಣ್ಣಿನ ಮನಸ್ಸಿನ ಅನಿಸಿಕೆಗಳಿಗೆ, ಅಭಿಪ್ರಾಯಗಳಿಗೆ ಕಿವುಡಾಗುತ್ತದೆ, ಕುರುಡಾಗುತ್ತದೆ ಈ ನಮ್ಮ ಸಮಾಜ. ಸ್ವತಂತ್ರ ವ್ಯಕ್ತಿತ್ವವಿಲ್ಲದೆ, ಪುರುಷನ ನೆರಳಾಗಿ, ಅವನ ಅಡಿಯಾಳಾಗಿ, ಅವನ ಬಯಕೆಯ ತೊತ್ತಾಗಿ ಆಕೆ ಜೀವಿಸಬೇಕೆಂದು ಹೇಳುವ ಸ್ವಾರ್ಥಿಗಳಿದ್ದಾರೆ. ಹೊತ್ತು, ಹೆತ್ತು, ಸಾಕಿ-ಸಲಹುವವಳು ಹೆಣ್ಣು, ಪ್ರೀತಿಯ ಆರೈಕೆ ಮಾಡಿ ಪೋಷಿಸುವವಳು ಹೆಣ್ಣು ಎಂಬುದರ ಅರಿವಿದ್ದೂ, ಆಕೆಯನ್ನು ನಿಷ್ಕರುಣೆಯಿಂದ ಶೋಷಿಸುವ ರಾಕ್ಷಸರು ಎಲ್ಲೆಡೆ ಇದ್ದಾರೆ. ಹೆಣ್ಣು ಮನಸ್ಸಿನ ನೋವು ಹಲವು ಬಗೆ. ಅವಳ ಮಾನಸಿಕ ಸಮಸ್ಯೆಗಳ ಚಿತ್ರಣ ಈ ಪುಸ್ತಕ.