Quantity
Product Description
ಜೀವನವನ್ನು ಚೆನ್ನಾಗಿ ಬದುಕುವುದೂ ಒಂದು ಕಲೆ. ಅದಕ್ಕೆ ಕೆಲ ವಿಶೇಷ ಸೂತ್ರಗಳಿವೆ. ಇವು ಬದುಕಿನ ಮೂಲಭೂತ ಸಿದ್ಧಾಂತಗಳು. ಇವುಗಳನ್ನೇ ಜೀವನದ ತತ್ವ ಅಥವಾ ನೀತಿ ಎಂದೂ ಕರೆಯಬಹುದು. ಈ ನೀತಿಗಳು ಮನುಷ್ಯನಿಗೆ, ಸಮಾಜಕ್ಕೆ ಹಾಗೂ ರಾಜ್ಯಕ್ಕೆ ದಾರಿದೀಪವಾಗಿವೆ. ಇವುಗಳನ್ನು ಅನುಸರಿಸಿದರೆ ಸುಖ, ಸಮೃದ್ಧಿ, ಶಾಂತಿ ಹಾಗೂ ನೆಮ್ಮದಿಯನ್ನು ಕಾಣಬಹುದು. ಜಗತ್ತು ಕಂಡ ಅಪ್ರತಿಮ ಚಾಣಾಕ್ಷ ವಿದ್ವಾಂಸ ಚಾಣಕ್ಯ ಇಂತಹ ಬದುಕುವ ಕಲೆಯನ್ನು ನೀತಿ ಹಾಗೂ ಸೂತ್ರಗಳ ರೂಪದಲ್ಲಿ ನಮಗೆ ನೀಡಿದ್ದಾನೆ.
ಭಾರತೀಯ ಪರಂಪರೆಯಲ್ಲಿ ಬೃಹಸ್ಪತಿ, ಶುಕ್ರಾಚಾರ್ಯ, ಶ್ರೀಕೃಷ್ಣ, ಶ್ರೀರಾಮ, ವಿದುರ ಹೀಗೆ ನಮಗೆ ಉತ್ತಮ ಬದುಕಿನ ದಾರಿ ತೋರಿದ ಹಲವಾರು ಮಹಾನ್ ವ್ಯಕ್ತಿಗಳಿದ್ದಾರೆ. ಇವರು ಬದುಕನ್ನು ತಮ್ಮದೇ ಆದ ರೀತಿಯಲ್ಲಿ ಅರ್ಥೈಸಿಕೊಂಡು ಜನಸಾಮಾನ್ಯರು ಹೇಗೆ ಬದುಕಿದರೆ ಅವರ ಜೀವನ ಸಾರ್ಥಕವಾಗುತ್ತದೆ ಎಂಬುದನ್ನು ಬೇರೆ ರೀತಿಯಲ್ಲಿ ಹೇಳಿದ್ದಾರೆ. ಬದುಕಿನ ಬೇರೆ ಬೇರೆ ಪರಿಸ್ಥಿತಿಗಳಲ್ಲಿ ಅವುಗಳನ್ನು ಹೇಗೆ ಬೇರೆ ಬೇರೆ ರೀತಿಯಲ್ಲಿ ಅಳವಡಿಸಿಕೊಳ್ಳಬಹುದು ಎಂಬುದು ನಮ್ಮ ಜಾಣ್ಮೆಗೆ ಬಿಟ್ಟದ್ದು. ಅವರ ಸಾಲಿನಲ್ಲೇ ಬರುವವನು ಚಾಣಕ್ಯ. ಇಂದು ಜಗತ್ತಿನಾದ್ಯಂತ ಚಾಣಕ್ಯನ ನೀತಿ ಹಾಗೂ ಚಾಣಕ್ಯನ ಅರ್ಥಸೂತ್ರಗಳು ರಾಜಕೀಯ ಮತ್ತು ರಾಜತಾಂತ್ರಿಕ ಕ್ಷೇತ್ರಗಳಲ್ಲಿ ಜನಪ್ರಿಯವಾಗಿವೆ. ಚಾಣಕ್ಯ ನೀತಿಯ ಅದ್ಭುತ ಲಕ್ಷಣವೆಂದರೆ ಜಯ! ಹೇಗಾದರೂ ಸರಿ, ಗೆಲುವು ನಿಮ್ಮದಾಗಿಸಿಕೊಳ್ಳಿ ಎಂಬುದು ಚಾಣಕ್ಯನ ಬೀಜವಾಕ್ಯ. ಗೆಲುವು ಪಡೆಯಲು ಶತ್ರುವನ್ನು ಸೋಲಿಸಬೇಕು. ಅದಕ್ಕಾಗಿ ನಾನಾ ಉಪಾಯಗಳನ್ನೂ, ಅಸ್ತ್ರಗಳನ್ನೂ, ಮಾರ್ಗಗಳನ್ನೂ ಬಳಸಬೇಕು. ಶತ್ರುವನ್ನು ಕೇವಲ ಸೋಲಿಸಿದರೆ ಸಾಲದು, ಮುಗಿಸಬೇಕು ಎಂಬುದು ಅವನ ಸಿದ್ಧಾಂತ. ಯಾವ ತಂತ್ರವನ್ನು ಯಾವಾಗ, ಎಲ್ಲಿ ಮತ್ತು ಹೇಗೆ ಬಳಸಬೇಕು ಹಾಗೂ ಎಷ್ಟು ಪ್ರಮಾಣದಲ್ಲಿ ಬಳಸಬೇಕು ಎಂಬುದನ್ನೂ ಅವನೇ ಹೇಳಿದ್ದಾನೆ.
ನಿಮ್ಮ ಕೈಲಿರುವ ಈ ಪುಸ್ತಕದಲ್ಲಿ ಚಾಣಕ್ಯನ ನೀತಿಸೂತ್ರಗಳು, ಅರ್ಥಶಾಸ್ತ್ರದ ಸೂತ್ರಗಳು ಹಾಗೂ ಚಾಣಕ್ಯನ ಜೀವನ ಚರಿತ್ರೆಯಿದೆ. ಚಾಣಕ್ಯ ನೀತಿಯ ಶ್ಲೋಕಗಳಿಗೆ ಅರ್ಥ ಹಾಗೂ ವಿವರಣೆಯಿದೆ. ಚಾಣಕ್ಯನ ಅರ್ಥಸೂತ್ರಗಳಿಗೆ ಇಂದಿನ ಆಧುನಿಕ ಜಗತ್ತಿನಲ್ಲಿ ಗೆಲ್ಲುವುದಕ್ಕೆ ಬೇಕಾದ ರೀತಿಯಲ್ಲಿ ವ್ಯಾಖ್ಯಾನವಿದೆ. ಇಂದಿನ ಕಾಲಕ್ಕೆ ಹೊಂದದೆ ಇರುವ ಚಾಣಕ್ಯನ ನೀತಿ ಹಾಗೂ ಸೂತ್ರಗಳನ್ನು ಅಲ್ಲಲ್ಲೇ ಖಂಡಿಸಲಾಗಿದೆ. ಬದುಕನ್ನು ಸಂಪೂರ್ಣವಾಗಿ ಅರಿತು, ಸುಂದರ ಜೀವನ ನಡೆಸುವ ಬಯಕೆ ಯಾರಿಗಿದೆಯೋ ಅವರೆಲ್ಲರೂ ಓದಲೇಬೇಕಾದ ಕೃತಿಯಿದು.
ಅಧೀತ್ಯೇದಂ ಯಥಾಶಾಸ್ತ್ರಂ ನರೋ ಜಾನಾತಿ ಸತ್ತಮಃ | ಧರ್ಮೋಪದೇಶ ವಿಖ್ಯಾತಂ ಕಾರ್ಯಾಕಾರ್ಯಂ ಶುಭಾಶುಭಮ್ ।
ಈ ಕೃತಿಯನ್ನು ವಿಧಿವತ್ತಾಗಿ ಅಧ್ಯಯನ ಮಾಡಿದರೆ ಮನುಷ್ಯನಿಗೆ ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು, ಯಾವುದನ್ನು ಮಾಡಬೇಕು ಮತ್ತು ಯಾವುದನ್ನು ಮಾಡಬಾರದು ಎಂಬುದು ತಿಳಿಯುತ್ತದೆ.
Author
Mahabala Seethalabhavi
Binding
Soft Bound
ISBN-13
9789348194213
Number of Pages
326
Publication Year
2025
Publisher
Vasanta Prakashana
Height
2 CMS
Length
22 CMS
Weight
300 GMS
Width
16 CMS
Language
Kannada