Product Description
ಕಳೆದ ಐದು ದಶಕಗಳಿಂದ ಕನ್ನಡದಲ್ಲಿ ಕಾದಂಬರಿ, ಕತೆ, ಕವನ, ನಾಟಕ, ಅನುವಾದ, ಪ್ರವಾಸ ಕಥನ, ಪ್ರಬಂಧ, ಮಕ್ಕಳ ಸಾಹಿತ್ಯ, ಬಾನುಲಿ ನಾಟಕ ಇತ್ಯಾದಿ ಹಲವು ಪ್ರಕಾರಗಳಲ್ಲಿ ನೂರಕ್ಕೂ ಹೆಚ್ಚು ಪುಸ್ತಕಗಳನ್ನು ನೀಡಿರುವ ಕೆ.ಟಿ.ಗಟ್ಟಿ ಪ್ರಾಥಮಿಕ ಶಿಕ್ಷಣದಿಂದ ಸ್ನಾತಕೋತ್ತರ ಶಿಕ್ಷಣದ ವರೆಗಿನ ಅಧ್ಯಾಪನ ಅನುಭವವುಳ್ಳವರು. ಹಲವು ವರ್ಷಗಳ ಕಾಲ ಸ್ವದೇಶದಲ್ಲಿಯೂ ವಿದೇಶದಲ್ಲಿಯೂ ಇಂಗ್ಲಿಷ್ ಶಿಕ್ಷಕರಾಗಿ ಕೆಲಸ ಮಾಡಿದ್ದಾರೆ. ಇಂಗ್ಲಿಷ್ ಉಚ್ಚಾರಶಾಸ್ತ್ರ, ಇಂಗ್ಲಿಷ್ ವ್ಯಾಕರಣ, ಇಂಗ್ಲಿಷ್-ಕನ್ನಡ ಭಾಷಾಧ್ಯಯನ, ಇಂಗ್ಲಿಷ್ ಮೂಲಕ ಕನ್ನಡ ಕಲಿಕೆ, ಇಂಗ್ಲಿಷ್ ಮೂಲಕ ತುಳು ಕಲಿಕೆ ಮುಂತಾದ ಕೃತಿಗಳನ್ನು ಪ್ರಕಟಿಸಿದ್ದಾರೆ. ಮಕ್ಕಳ ಶಿಕ್ಷಣ ಮತ್ತು ಪಾಲಕರ ಶಿಕ್ಷಣ ಕ್ಷೇತ್ರದಲ್ಲಿ ಕೆಲವು ಕೃತಿಗಳು ಇಂಗ್ಲಿಷಿನಲ್ಲಿ ಮತ್ತು ಕನ್ನಡದಲ್ಲಿ ಪ್ರಕಟವಾಗಿವೆ. ಇವುಗಳಲ್ಲಿ, ಮುಖ್ಯವಾಗಿ ಉಭಯ ಭಾಷಾಭ್ಯಾಸದ ನವೀನ ಕೃತಿ 'ಬೈಲಿಂಗ್ವಲ್ ಮಾಸ್ಟರ್', ಮತ್ತು ಪಾಲಕರಿಗಾಗಿ 'ಗುರುಗಳಾಗಿ ತಾಯಿತಂದೆ' ಎಂಬ ಕೃತಿ ಬೆಸ್ಟ್ ಸೆಲ್ಲರ್ ಎನಿಸಿಕೊಂಡಿವೆ. 'ಉತ್ಕೃಷ್ಟತೆಗಾಗಿ ತಾಯಿತಂದೆ' ಎಂಬ ಕೃತಿಯಲ್ಲಿ ಗಟ್ಟಿಯವರು ತಮ್ಮ ಇಪ್ಪತ್ತೆಂಟು ವರ್ಷಗಳ ಅಧ್ಯಾಪನ ಅನುಭವ ಮತ್ತು ಶೈಕ್ಷಣಿಕ ಚಿಂತನೆಯ ಸಾರವನ್ನು ಮಕ್ಕಳ ಪಾಲಕ-ಪೋಷಕರಿಗಾಗಿ ಬರಹರೂಪಕ್ಕಿಳಿಸಿದ್ದಾರೆ. ಇತ್ತೀಚೆಗೆ, ಇಂಗ್ಲಿಷ್ ಮತ್ತು ಕನ್ನಡ ಎರಡೂ ಭಾಷೆಯಲ್ಲಿ ಸಮಾನ ಮಟ್ಟದ ಸಂವಾದ ಪ್ರಭುತ್ವವನ್ನು ಸಾಧಿಸಲಿಚ್ಛಿಸುವವರಿಗಾಗಿ 'ಬೈಲಿಂಗ್ವಲ್ ಸ್ಪೀಕರ್' ಎಂಬ ಕೃತಿಯನ್ನು ಹೊರತಂದಿದ್ದಾರೆ.