Product Description
ನೋಯುವ ಹಲ್ಲಿಗೆ ಮತ್ತೆ ಮತ್ತೆ ಹೊರಳುವ ಹಾಗೆ, ಕನ್ನಡದ ಕ್ರಿಯಾಶೀಲ ಮನಸ್ಸುಗಳು ೧೨ನೆಯ ಶತಮಾನದ ಕಥೆಗೆ ಧಾವಿಸುತ್ತವೆ ಎಂಬ ಉಲ್ಲೇಖವನ್ನು ನೆನಪಿಸಿಕೊಂಡಾಗಲೆಲ್ಲ, ನನಗೆ, ಈ ಹುಲ್ಲುನೋವನ್ನು ಮತ್ತೆ ಮತ್ತೆ ನೆನೆದು ಸುಖಿಸುವುದಕ್ಕಿಂತ ಒಬ್ಬ ಒಳ್ಳೆ ದಂತವೈದ್ಯರನ್ನು ಕಂಡು ಚಿಕಿತ್ಸೆ ಪಡೆಯುವುದು ಒಳ್ಳೆಯದು ಎಂದು ಕಾಣುತ್ತದೆ. ಹಾಗಂತ, ೧೨ನೆಯ ಶತಮಾನವನ್ನು ನಾವು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಿದ್ದೇವೆ ಎಂಬುದು ಸಮಸ್ಯೆಯಲ್ಲ; ಬದಲು. ಆ ನೆನಪು ಮಾಡಿಕೊಳ್ಳುವ ವಿಧಾನದಲ್ಲಿ ಸಮಸ್ಯೆಯಿದೆ. ಅತ್ತ ಐಸಿಹಾಸಿಕ ನಿಖರತೆಯಲ್ಲೂ ಆ ಕಾಲವನ್ನು ಗ್ರಹಿಸದೆ, ಇತ್ತ ಅದನ್ನೊಂದು ಕಾವ್ಯ-ರೂಪಕವಾಗಿಯೂ ನೋಡದೆ, ೧೨ನೆಯ ಶತಮಾನವೆಂಬುದು ಕೇವಲ ಸಿದ್ಧಮಾದರಿಗಳ ಒಂದು ಹಗಲುಗನಸಿನ ತಾಣವಾದರೆ, ಅದು ಮಾನಸಿಕ ಸೋಮಾರಿತನದಿಂದ ವಿಹಾರಕ್ಕೆ ಹೋಗುವ ಸ್ಥಳವಾಗಿಬಿಡುತ್ತದೆ. ಮುಕುಂದರಾವ್ ಅವರ ಪ್ರಸ್ತುತ ಕಾದಂಬರಿಯು ೧೨ನೆ ಶತಮಾನದೊಳಕ್ಕೆ ಇಂಥ ಸಿದ್ಧಮಾದರಿಯ ಪಯಣವನ್ನು ಮಾಡದೆ, ಹೊಸ ಬಗೆಯಿಂದ ಪ್ರವೇಶಿಸಹೊರಟಿದೆ ಎಂಬುದು ಈ ಕೃತಿಯ ವಿಶೇಷವಾಗಿ ನನಗೆ ಕಂಡಿದೆ. ಉದಾಹರಣೆಗೆ, ವಚನ ಚಳುವಳಿಯನ್ನು ನ ಭೂತೋ ನ ಭವಿಷ್ಯತಿ ಎಂಬಂಥ ಪ್ರತ್ಯೇಕಿತ ಸ್ವರೂಪದಲ್ಲಿ ಕಾಣದೆ, ಅದನ್ನು ನಮ್ಮ ನಾಡಿನ ಅವಧೂತ ಪರಂಪರೆಗಳ ಮತ್ತು ತಾತ್ವಿಕ ಚರ್ಚೆಗಳ ಒಂದು ಭಾಗವಾಗಿ ಕಾಣುವ ಕ್ರಮದಿಂದ ಹೊಸ ತಿಳುವಳಿಕೆ ಸಾಧ್ಯವಿದೆಯೆಂಬುದನ್ನು ಈ ಕಾದಂಬರಿ ನನಗೆ ಕಾಣಿಸಿಕೊಟ್ಟಿದೆ. ಮುಕುಂದ ರಾವ್ ಇಂಥ ಸಿದ್ಧಮಾರಿಯ ನಿರಚನೆಯ ಕೆಲಸವನ್ನು ಬೌದ್ಧಿಕ ಹತ್ಯಾರಗಳನ್ನು ಬಳಸಿ ಮಾಡದೆ ಕೇವಲ ಕಥನದ ಶಯ್ಯೆಯ ಮೂಲಕವೇ ಸಲೀಸಾಗಿ ಮಾಡಿದ್ದಾರೆಂಬುದೂ ಈ ಕಾದಂಬರಿಯ ಇನ್ನೊಂದು ವಿಶೇಷವಾಗಿದೆ.