Product Description
ಪ್ರಖರ ಚಿಂತಕ, ಜಾನಪದ ವಿದ್ವಾಂಸ, ಮಾನವೀಯ ಮೌಲ್ಯಗಳನ್ನು ಜೀವನದುದ್ದಕ್ಕೂ ನಿಷ್ಠೆಯಿಂದ ಪಾಲಿಸಿಕೊಂಡು ಬಂದ ವ್ಯಕ್ತಿ ಶ್ರೀ ಮುದೇನೂರ ಸಂಗಣ್ಣ. ಅವರ ನಾಟಕ, ‘ಕರುಣೆಯ ಕಂದ’ ರಂಗಭೂಮಿಗೆ ಕೊಟ್ಟ ಸುಂದರ ಕಾಣಿಕೆ. ‘ಇದು ಕಾದಂಬರಿಯ ವಿಷಯವಾಗಿದ್ದರೆ?’ ಎಂಬ ಪ್ರಶ್ನೆ ಮೂಡಿಸಿತು. ಕಾರಣ ನಾಟಕಕ್ಕೆ ಕೆಲವು ಮಿತಿಗಳಿರುತ್ತವೆ, ಇದರಿಂದ ಸ್ಥಳ ಮತ್ತು ಕಾಲದ ಬಂಧನ ಉಂಟಾಗುತ್ತದೆ. ಪರಿಸರ, ಪ್ರಕೃತಿ ಮತ್ತು ವಿಶಾಲ ಕ್ಯಾನವಾಸಿಗೆ ಚೌಕಟ್ಟು ಬರುತ್ತದೆ. ಕಾದಂಬರಿಗೆ ಅಂಥ ಚೌಕಟ್ಟಿನ ಅನಿವಾರ್ಯತೆ ಇರುವುದಿಲ್ಲ, ದೃಶ್ಯ ಬಂಧದ ಮಿತಿ ಇರುವುದಿಲ್ಲ. ಏನಿದ್ದರೂ ಸರಿಯೇ, ಈ ನಾಟಕ ಹೊಸ ಅನುಭವಕ್ಕೆ ನಾಂದಿ ಹಾಡುತ್ತದೆ. ಇಲ್ಲಿ ಹಿಂಸೆ ಮತ್ತು ಅಹಿಂಸೆಗಳನ್ನು ‘ಜಕ್ಸ್ಟಾ ಪೋಜು’ ಮಾಡಿನೋಡಲಾಗಿದೆ. ಅತ್ಯಂತ ಸಮರ್ಥವಾಗಿ ಈ ಎರಡು ವಿಷಯಗಳನ್ನು ‘ಮುಖಾಮುಖಿ’ ನಿಲ್ಲಿಸಲಾಗಿದೆ. ತರ್ಕಬದ್ಧ ಮಾತುಗಳಿಂದ, ಅಭಿವ್ಯಕ್ತಿಯ ಲಾಲಿತ್ಯದಿಂದ, ಭಾಷೆಯ ಸಂಯಮದ ಬಳಕೆಯಿಂದ ನಾಟಕದ ‘ಚೆಲವು’ ಹೆಚ್ಚಾಗಿದೆ.