Product Description
ಇಂದಿರಾಬಾಯಿಗೆ 'ಸದ್ಧರ್ಮ ವಿಜಯ' ಎಂಬ ಇನ್ನೊಂದು ಹೆಸರು ಕೊಡುವಲ್ಲಿ ಗುಳವಾಡಿಯವರಿಗೆ ನೈತಿಕ ಉದ್ದೇಶವೊಂದಿದ್ದಿತೆನ್ನುವುದು ಸ್ಪಷ್ಟವಿದೆ. "ಸತ್ಯತೆ, ಹೃದಯನಿರ್ಮಲತೆ ಇವೆರಡು ಸಾಧನಗಳೇ ನಮಗೆ ಇಹಪರದಲ್ಲಿಯೂ ಸಾರ್ಥಕಗಳಾಗಿವೆ. ಇವುಗಳನ್ನು ಬಿಟ್ಟು, ಸರ್ವ ಪ್ರಯತ್ನಗಳೂ ನಿರರ್ಥಕವೇ. ಇದನ್ನು ಸಾದೃಶ್ಯಗೊಳಿಸುವುದೇ ಈ ಪುಸ್ತಕದ ಉದ್ದೇಶವು" ಎಂದು ಹೇಳಿ ಗ್ರಂಥಕರ್ತರೇ ತಮ್ಮ ನೈತಿಕ ನಿಲುವನ್ನು ಸೂಚಿಸಿದ್ದಾರೆ. ಹೀಗಿದ್ದರೂ, ಇಂದಿರಾಬಾಯಿ ಸರಳ ನೀತಿಕಥೆಯಲ್ಲ. ಅನ್ಯಾಯದಿಂದ ಕೊಲ್ಲಲ್ಪಟ್ಟ ಸುಂದರರಾಯನ ಮಗ ಭಾಸ್ಕರನ ಯಶಸ್ಸಿನಲ್ಲಿ, ವಿಧವೆಯಾದರೂ ಪಾವಿತ್ರ್ಯವನ್ನು ಕಾಪಾಡಿಕೊಂಡು ಬರುವ ಇಂದಿರೆಯ ಕಲ್ಯಾಣದಲ್ಲಿ ಕಾದಂಬರಿ ಕೊನೆಗೊಳ್ಳುತ್ತದೆಯಾದರೂ 'ಸತ್ಯವೇ ಜಯ' ಎಂಬ ನೀತಿ ಕಾದಂಬರಿಯ ಮೊದಲ ಭಾಗದಲ್ಲಿ ವ್ಯಂಗ್ಯಕ್ಕೆ ಗುರಿಯಾಗುತ್ತದೆ. ಸುಂದರರಾಯನ ಕೊಲೆಗಾರ ಭೀಮರಾಯ ನಿರ್ದೋಷಿಯೆಂದು ನ್ಯಾಯಾಲಯದಿಂದ ಬಿಡುಗಡೆ ಹೊಂದುವುದು, ಮಠಾಧಿಪತಿಗಳಿಂದ ಧರ್ಮವಿಚಾರಕನೆಂದು ನೇಮಿಸಲ್ಪಟ್ಟು ಸಮಾಜದಲ್ಲಿ ಗೌರವ ಸ್ಥಾನವನ್ನು ಗಳಿಸುವುದು ಇತ್ಯಾದಿ ಘಟನೆಗಳು ಜಯ ದೊರೆಯುವುದು ಸತ್ಯಕ್ಕಲ್ಲ ಎಂಬ ಕಟು ವಾಸ್ತವದತ್ತ ಬೊಟ್ಟು ಮಾಡಿ ತೋರಿಸುತ್ತದೆ. ಕಾದಂಬರಿಯ ಕೊನೆಯಲ್ಲಿ ಕೂಡ ಭೀಮರಾಯ ಮತ್ತು ಅವನಿಗಿಂತ ದುಷ್ಟಳಾದ ಅವನ ಹೆಂಡತಿ ಅಂಬಾಬಾಯಿ ಸುರಕ್ಷಿತವಾಗಿಯೇ ಉಳಿಯುತ್ತಾರೆ...
...ಇಂಥ ವಿಡಂಬನೆಗೆ ನೈತಿಕ ಕೇಂದ್ರವೊಂದು ಬೇಕಾಗುತ್ತದೆ. ಇದನ್ನು ಕಾದಂಬರಿಕಾರರು ಅಮೃತರಾಯ-ಜಲಜಾಕ್ಷಿಯರ ಸುಸಂಸ್ಕೃತ, ಪುರೋಗಾಮಿ ಸಂವೇದನೆಯಲ್ಲಿ ಪ್ರಸ್ಥಾಪಿಸುತ್ತಾರೆ. ದುಷ್ಟಶಕ್ತಿಗಳನ್ನೆದುರಿಸಿ ಭಾಸ್ಕರ ಹಾಗೂ ಇಂದಿರೆಯರ ಭವಿತವ್ಯವನ್ನು ರೂಪಿಸುವವರೇ ಇವರು. ಇಂಥ ಪಾತ್ರಗಳು ಕೂಡ ಕಾದಂಬರಿಯಲ್ಲಿ ಸಹಜವಾಗಿಯೇ ಬರುತ್ತವೆ...