Quantity
Product Description
ನೀವು ಹೇಗೆ ಬರೆಯುವುದು?” ಎಂಬುದು ಅನೇಕರ ಸಹಜವಾದ ಪ್ರಶ್ನೆ. ವಾಸ್ತವವಾಗಿ, ನಾನು ‘ಹಾಗೆ’ ಅಂದರೆ ಹಾಳೆಯ ಮೇಲೆ ಲೇಖನಿ ಹಿಡಿದು ಬರೆಯುವುದೇ ಇಲ್ಲ. ಬರಹಗಳನ್ನು ಕಂಪ್ಯೂಟರ್ ಪರದೆಯ ಮೇಲೆ ಕ್ಲಿಕ್ಕಿಸುವುದೂ ಕೊನೆಯ ಹಂತದಲ್ಲಿಯಷ್ಟೆ!.
ಕಾರಣ ನನ್ನ ಕಥೆ, ಕವನ, ಬರಹಗಳೆಲ್ಲವೂ ಮೆದುಳಿನಲ್ಲಿ ಉದ್ಭವವಾದಮೇಲೆ, ಅಲ್ಲಿಯೇ ಯಥೇಚ್ಛವಾಗಿ ತಮಗೆ ಬೇಕೆನಿಸಿದ ಜಾಡನ್ನು ಹಿಡಿದು, ತಮ್ಮಷ್ಟಕ್ಕೆ ತಾವೇ ಬರೆದುಕೊಂಡು ಹೋಗುತ್ತಿರುತ್ತವೆ. ಹಳಿಯ ಮೇಲೆ ವೇಗವಾಗಿ ಚಲಿಸಿದ ರೈಲು, ಸಂಚಾರ ಮುಗಿಸಿ ಗಾಲಿಗಳನ್ನು ಉಜ್ಜಿಕೊಂಡು ನಿಧಾನವಾಗಿ ನಿಲ್ಲುವಂತೆ, ನನ್ನ ಮೆದುಳು ರಚಿಸಿಕೊಂಡು ಮುಗಿಸಿದ ಬರಹಗಳು ನನ್ನ ಗಮನಕ್ಕಾಗಿ ಕಾಯುತ್ತ, ಮೆದುಳಿನ ಬೂದು ಜೀವಕೋಶಗಳಲ್ಲಿ ಹಾಗೆಯೇ ವಾರ, ತಿಂಗಳುಗಳನ್ನು ಬೇಸರದಿಂದ ಸವೆಸುತ್ತಿರುತ್ತವೆ! ಅಲ್ಲಲ್ಲಿ ಪದ-ಪಾತ್ರ-ಸನ್ನಿವೇಶಗಳನ್ನು ಸ್ವಲ್ಪ ಮಾರ್ಪಾಟೂ ಮಾಡಿಕೊಂಡು ಪದೇ ಪದೇ ‘ಮೆಚ್ಚುಗೆಯಾಯಿತೆ?’ ಎಂದು ಪಿಸುಮಾತಿನಲ್ಲಿ ನನ್ನನ್ನು ಕೇಳಿಕೊಂಡು ಮಿಸುಕಾಡುತ್ತಿರುತ್ತವೆ!.
ಹತ್ತೊಂಬತ್ತನೆಯ ಶತಮಾನದ ಕೊನೆಯಲ್ಲಿ ಬೆಂಗಳೂರು ಹಾಗೂ ಆಸು-ಪಾಸನ್ನು ಪೀಡಿಸಿದ ಮಹಾಮಾರಿ ಪ್ಲೇಗ್ ಹಾಗೂ ರನ್ನರ್ ರಾಜಪ್ಪ ಅನೇಕ ದಶಕಗಳಿಂದ ನನ್ನನ್ನು ಕಾಡುತ್ತಲೇ ಇದ್ದ ಕಥಾವಸ್ತು. ಅದನ್ನು ರೈಲು ಹತ್ತಿಸಿದೆ. ‘ತಾಯಿ ಬಿಟ್ಟು ಹೋದ’ ಮಗಳು ಎಂದು ಪಟ್ಟ ಕಟ್ಟಿಕೊಂಡಿದ್ದ ಶಾರದ ನನ್ನ ಬೆನ್ನುಹತ್ತಿ ಬೇಡಿಕೊಳ್ಳುತ್ತಿದ್ದು, ತನ್ನ ರೈಲನ್ನು ಹತ್ತಿಕೊಂಡುಬಿಟ್ಟಳು. ಆಸ್ಪತ್ರೆಯಲ್ಲಿ ಪ್ರೇಮಾಂಕುರವಾಗಬಹುದಾದ ಅನೇಕ ಸನ್ನಿವೇಶಗಳು ನನಗೆ ದಿನನಿತ್ಯ ಗೋಚರಿಸುತ್ತಿರುತ್ತದೆ. ಅದಕ್ಕೆ ನನ್ನ ಮೆದುಳಿನಲ್ಲಿ ಡಾ|| ಶುಭಾಂಗಿ ಹುಟ್ಟಿಕೊಂಡು, ತಾನೂ ಬೋಗಿ ಏರಿದಳು. ಅತ್ತೆ ಮತ್ತು ಡಾಕ್ಟರ್ ಸೊಸೆಯನ್ನು ‘ಅತ್ತೆಗೆ ನೋವು-ಸೊಸೆಗೆ ಕಾವು’ ರೈಲಿನಲ್ಲಿ ಹತ್ತಿಸಿ, ಅಲ್ಲಿ ಸ್ವಲ್ಪ ವಾಸ್ತವ ಹಾಗೂ ಸ್ವಲ್ಪ ತಮಾಷೆಗಾಗಿ ವೈದ್ಯರ ಪೇಚಾಟದ ಕಿಟಕಿ ನೋಟವನ್ನು ತೋರಿಸಿದ್ದಾಯಿತು. ದೇವರು ನಮ್ಮ ಭೂಮಿಗೆ ಬಂದರೆ, ನಮ್ಮ ನ್ಯೂನತೆಗಳಿಗೆ ಹೇಗೆ ಒಗ್ಗಿಕೊಳ್ಳಬಹುದು ಎಂದು ಯೋಚಿಸುತ್ತಾ ಶ್ರೀ ಕೃಷ್ಣನನ್ನು ‘ವಿಶ್ವ(ಕು)ರೂಪ ದರ್ಶನ’ ಎಂಬ ರೈಲು ಹತ್ತಿಸಿ, ವಿಶ್ವ ಪರ್ಯಟನೆಗೆ ಬಿಟ್ಟೆ. ಕೋವಿಡ್ ಸಮಯದಲ್ಲಿ ‘ಹೊಟ್ಟೆಗಾಗಿ’ ಪರದಾಡುವ ರವಿ ಅಥವಾ ತಮ್ಮ ಬದಲಾದ ಜೀವನದ ಗತಿಯನ್ನು ಒಪ್ಪಿಕೊಳ್ಳುವ ಮೈಥಿಲಿ ಹಾಗೂ ತ್ರಿವೇಣಿ ಟೀಚರ್ ತಮ್ಮ ಬೋಗಿಗಳಲ್ಲಿ ಬದುಕಿನ ಪ್ರಯಾಣವನ್ನು ಸವೆಸಿದರು. ಕೋವಿಡ್ ಎಂಬ ಕಾರ್ಮೋಡಕ್ಕೆ ಬೆಳ್ಳನೆಯ ಕಿರಣವಿರಲೆಂದು, ನರ್ಸ್ ವನಿತಾಳಿಗೂ ಟಿಕೆಟ್ ಕೊಟ್ಟು ಒಳ್ಳೆಯ ಬೋಗಿಯಲ್ಲಿ ಕೂರಿಸಿದೆ. ಅನೇಕ ವೈಜ್ಞಾನಿಕ ಕಥೆಗಳನ್ನು ಬರೆದ ನನಗೆ, ಈ ವೈವಿಧ್ಯಮಯವಾದ ರೈಲುಗಳ ಮಧ್ಯೆ, ಒಂದು ವೈಜ್ಞಾನಿಕ ರೈಲನ್ನು ಓಡಿಸದಿದ್ದರೆ ಸ್ವಯಂ ದ್ರೋಹವಾದೀತು ಎಂದು ‘ಆವಿಷ್ಕಾರ’ವನ್ನು ಸೇರಿಸಿಕೊಂಡೆ. ಈ ಸಂಕಲನದಲ್ಲಿರುವ ಎಲ್ಲಾ ರೈಲುಗಳಿಗಿಂತ ಇದು ಹೊಸದು.
ಈ ಹನ್ನೊಂದು ಕಥೆಗಳ ಸಂಕಲನದಲ್ಲಿನ ಕೆಲವು ಕಥೆಗಳು ಈ ಹಿಂದೆ ತರಂಗ ವಾರಪತ್ರಿಕೆ ಹಾಗೂ ತುಷಾರ ಮಾಸಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು. ಮೆದುಳಿನಲ್ಲಿ ಅನೇಕ ಹಳಿಗಳು ಈಗಲೂ ಸಕ್ರಿಯವಾಗಿ ತುಡಿಯುತ್ತಿವೆ. ಸದ್ಯಕ್ಕೆ ಅವುಗಳು ಕಾಯಬೇಕು! ಇಲ್ಲಿರುವ ಹನ್ನೊಂದು ಕಥೆಗಳು ವಿವಿಧ ಪ್ರಕಾರಗಳಲ್ಲಿದ್ದು, ನಿಮ್ಮನ್ನು ವೈವಿಧ್ಯಮಯವಾದ ಸಾಹಿತ್ಯ ವಿಹಾರದಲ್ಲಿ ಸತ್ಕರಿಸಲಿ ಎಂದು ಆಶಿಸುತ್ತಾ...
Author
Dr Shantala
Binding
Soft Bound
Number of Pages
156
Publication Year
2025
Publisher
Harivu Books
Height
2 CMS
Length
22 CMS
Weight
200 GMS
Width
14 CMS
Language
Kannada