Product Description
ಭಾರತದ ಬೇರೆ ಬೇರೆ ಭಾಷೆಗಳ ಹಲವು ಪ್ರಮುಖ ಲೇಖಕರ ಮುಖ್ಯ ಬರಹಗಳನ್ನು ಕುರಿತ ಇಪ್ಪತ್ತು ವಿಮರ್ಶಾತ್ಮಕ ಲೇಖನಗಳನ್ನು ಒಳಗೊಂಡಿರುವ ಟಿ. ಪಿ. ಅಶೋಕರ “ಕಥನ ಭಾರತಿ” ಭಾರತೀಯ ಸಾಹಿತ್ಯದ ಓದು ಮತ್ತು ಅಧ್ಯಯನಗಳಿಗೆ ಒಂದು ಅರ್ಥಪೂರ್ಣ ಪ್ರವೇಶಿಕೆಯನ್ನು ಒದಗಿಸುತ್ತದೆ. ಮೊದಲ ಸ್ವಾತಂತ್ರ್ಯ ಚಳುವಳಿ(೧೮೫೭)ಯಿಂದ ಇಂದಿನ ಖಾಸಗೀಕರಣ, ಉದಾರೀಕರಣ, ಜಾಗತೀಕರಣದ ವರೆಗೆ ವ್ಯಾಪಿಸಿಕೊಂಡ ವಿಶಾಲವಾದ ಜೀವನ ಸಂದರ್ಭಕ್ಕೆ ನಮ್ಮ ಗಣ್ಯ ಲೇಖಕರು ಪ್ರತಿಕ್ರಿಯಿಸಿದ, ಪ್ರತಿಸ್ಪಂದಿಸಿದ ಬಗೆಯನ್ನು ಗಮನಿಸಿ, ಗುರುತಿಸಿ, ಚರ್ಚಿಸುವ ಈ ಲೇಖನಗಳು ಮುಖ್ಯವಾಗಿ ಭಾರತೀಯ ಕಥಾ ಸಾಹಿತ್ಯ ಸಾಗಿ ಬಂದ ಹಲವು ಮುಖ್ಯ ಘಟ್ಟಗಳನ್ನು ಸಮರ್ಥವಾಗಿ ತೋರುವಂತಿವೆ. ವಸಾಹತುಶಾಹಿ ಅನುಭವ, ವಿಭಜನೆಯ ದುರಂತ, ಸ್ವಾತಂತ್ರ್ಯೋತ್ತರ ಭಾರತದ ನಡೆಗಳನ್ನು ಆಧುನಿಕ ಭಾರತೀಯ ಸಾಹಿತ್ಯದ ಹಲವು ಮಹತ್ವದ ಕೃತಿಗಳು ತೆರೆದು ತೋರಿರುವ ಹಲವು ಬಗೆಗಳನ್ನೂ, ಮಾದರಿಗಳನ್ನೂ ಕಾಣಿಸುವ ಅಶೋಕರ ಬರಹಗಳು ಭಾರತೀಯ ಸಾಹಿತ್ಯದ ಓದುಗರು, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಿಗೆ ಅನೇಕ ರೀತಿಗಳಲ್ಲಿ ಉಪಯುಕ್ತವಾಗುವಂತಿವೆ. ಆಯಾ ಕೃತಿಗಳ ಸಾಹಿತ್ಯಿಕ ಅನನ್ಯತೆಗಳನ್ನೂ, ವೈಶಿಷ್ಟ್ಯಗಳನ್ನು ಗುರುತಿಸುವಂತೆಯೇ ಅವುಗಳ ಐತಿಹಾಸಿಕ, ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಮಹತ್ವ ಮತ್ತು ಪ್ರಸ್ತುತತೆಗಳನ್ನೂ ಚರ್ಚಿಸುವ ಈ ಪುಸ್ತಕ ಸಮಕಾಲೀನ ಸಾಹಿತ್ಯ ವಿಮರ್ಶೆಗೆ ಒಂದು ಗಮನಾರ್ಹ ಸೇರ್ಪಡೆಯಾಗಿದೆ.
ಭಾರತೀಯ ಸಾಹಿತ್ಯದ ಅಧ್ಯಯನ, ಪರಿಚಯ ಮತ್ತು ಪ್ರಸಾರಣಕ್ಕಾಗಿ ಮಣಿಪಾಲ ವಿಶ್ವವಿದ್ಯಾಲಯವು ಸ್ಥಾಪಿಸಿರುವ ಡಾ| ಟಿ. ಎಂ. ಎ. ಪೈ ಭಾರತೀಯ ಸಾಹಿತ್ಯ ಪೀಠವು ವಿಶೇಷ ಉಪನ್ಯಾಸಗಳು, ಪ್ರಾತ್ಯಕ್ಷಿಕೆಗಳು, ವಿಚಾರಸಂಕಿರಣಗಳು ಮತ್ತು ಅಧ್ಯಯನ ಶಿಬಿರಗಳನ್ನು ಆಯೋಜಿಸುತ್ತಿರುವುದರ ಜೊತೆಗೆ ಈಗ ‘ಡಾ| ಟಿ. ಎಂ. ಎ. ಪೈ ಭಾರತೀಯ ಸಾಹಿತ್ಯ ಪೀಠ ಪುಸ್ತಕ ಮಾಲೆ’ಯೊಂದನ್ನೂ ಪ್ರಾರಂಭಿಸುತ್ತಿದೆ. ಖ್ಯಾತ ವಿಮರ್ಶಕ ಟಿ. ಪಿ. ಅಶೋಕ ಅವರ “ಕಥನ ಭಾರತಿ” ಈ ಮಾಲಿಕೆಯ ಮೊದಲ ಕೃತಿ. ಭಾರತದ ಅನೇಕ ಗಣ್ಯ ಲೇಖಕರ ಮಹತ್ವದ ಬರಹಗಳನ್ನು ಪರಿಚಯಿಸಿ, ವಿಶ್ಲೇಷಿಸಿ, ವ್ಯಾಖ್ಯಾನಿಸುವ ಇಪ್ಪತ್ತು ಮೌಲಿಕ ಲೇಖನಗಳ ಈ ಸಂಪುಟವು ಸಾಹಿತ್ಯ, ಸಮಾಜ, ಸಂಸ್ಕೃತಿಗಳಲ್ಲಿ ಆಸಕ್ತಿಯಿರುವ ಸಾಮಾನ್ಯ ಓದುಗರಿಗೂ ಮತ್ತು ಅವುಗಳ ಅಧ್ಯಯನಗಳಲ್ಲಿ ತೊಡಗಿಕೊಂಡಿರುವ ವಿದ್ಯಾರ್ಥಿಗಳು, ಅಧ್ಯಾಪಕರು, ಸಂಶೋಧಕರುಗಳಿಗೂ ಹಲವು ಬಗೆಗಳಲ್ಲಿ ಉಪಯುಕ್ತವಾಗುವಂತಿದೆ. ಕನ್ನಡದಲ್ಲೇ ಭಾರತೀಯ ಸಾಹಿತ್ಯದ ವೈಶಾಲ್ಯ-ವೈವಿಧ್ಯಗಳನ್ನು ತೋರಬಲ್ಲ ಈ ಕೃತಿಯು ತನ್ನ ಸರಳ ಆದರೆ ಲವಲವಿಕೆಯ ನಿರೂಪಣೆಯಲ್ಲಿ ಓದುಗರಿಗೆ ಆಪ್ತವಾಗುತ್ತಲೇ ಅವರನ್ನು ಸಾಹಿತ್ಯದ ಗಂಭೀರ ನೆಲೆಗಳಿಗೆ ಒಯ್ಯಬಲ್ಲ ಸಾಮರ್ಥ್ಯವನ್ನು ಹೊಂದಿದೆ. ನೆರೆಹೊರೆಯಲ್ಲಿದ್ದರೂ ಭಾಷಿಕ ಗಡಿಗಳಿಂದ ದೂರವಾಗಿ, ಅಪರಿಚಿತವಾಗಿಯೇ ಉಳಿದುಬಿಟ್ಟಿರುವ ಭಾರತೀಯ ಸಾಹಿತ್ಯದ ಸಮೃದ್ಧಿ ಮತ್ತು ಪ್ರಸ್ತುತತೆಗಳನ್ನು ಕಾಣಿಸಿಕೊಡುವ ಈ ಕೃತಿ ಈ ಬಗೆಯ ಕನ್ನಡ ಪುಸ್ತಕಗಳಲ್ಲೇ ಅಪರೂಪವಾದದ್ದು ಮತ್ತು ಅನನ್ಯವಾದದ್ದು.