Product Description
ನಮ್ಮ ದೇಶದಲ್ಲಷ್ಟೇ ಅಲ್ಲದೆ ಪ್ರಪಂಚದೆಲ್ಲೆಡೆಯೂ ತನ್ನ ಬೇರನ್ನು ಇಳಿಸಿಕೊಂಡ ಭ್ರಷ್ಟ ವ್ಯವಸ್ಥೆಯ ಮೂಲೋತ್ಪಾಟನೆ ಅಸಾಧ್ಯವೆಂಬಂತೆ ಅದು ವಿಷವೃಕ್ಷವಾಗಿ ಬೆಳೆದಿದೆ. ಪ್ರಾಮಾಣಿಕ ಸಂಕಲ್ಪವೊಂದಿದ್ದರೆ ಚಿಟಿಕೆ ಹೊಡೆಯುವಷ್ಟು ಸುಲಭದಲ್ಲಿ ನಿವಾರಿಸಬಹುದಾದ ಸಮಸ್ಯೆಯೊಂದು ಬೃಹದಾಕಾರ ತಾಳಿದ್ದು ಹೇಗೆಂಬ ಬಗ್ಗೆ ಶ್ರೀ ವೈ. ಜಿ. ಮುರಳೀಧರನ್ ಪುಸ್ತಕವೊಂದನ್ನು ಬರೆದಿದ್ದಾರೆ. ಜನಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುವಂತೆ ಬರೆದಿರುವ ಈ ಕೃತಿಯಲ್ಲಿ ಭ್ರಷ್ಟಾಚಾರವನ್ನು ತಡೆಗಟ್ಟುವ ಬಗ್ಗೆ ಸಾಕಷ್ಟು ಕಿವಿಮಾತುಗಳನ್ನು, ಭ್ರಷ್ಟಾಚಾರ ಬೆಳೆದಿರುವ ಅಗಾಧ ಪ್ರಮಾಣವನ್ನೂ ವಿವರಿಸಿದ್ದಾರೆ. ಇಂದು ಭ್ರಷ್ಟ ವ್ಯವಸ್ಥೆಯನ್ನು ತಡೆಗಟ್ಟುವ ಪ್ರಯತ್ನವೆಂದರೆ ಬುಡಸಹಿತ ಬೇರನ್ನು ಕೀಳುವ ಬದಲು ಮರದ ರೆಂಬೆ ಕೊಂಬೆಗಳನ್ನು ಕಡಿದು ಹಾಕುವಷ್ಟಕ್ಕೆ ಸೀಮಿತವಾಗಿದೆ. ದಿನವೂ ತಮ್ಮ ಕೆಲಸ ಕಾರ್ಯಗಳು ಸುಗಮವಾಗಿ ನಡೆಯದೆ ಇರುವುದಕ್ಕೆ ಕಾರಣ ಭ್ರಷ್ಟಾಚಾರ ಎಂಬ ಹೆಬ್ಬಂಡೆಯೊಂದು ಎದುರಾಗಿರುವುದು ಶ್ರೀಸಾಮಾನ್ಯನ ಅರಿವಿಗೆ ಬಂದಿದೆ. ಭ್ರಷ್ಟಾಚಾರದ ದೊಡ್ಡ ದೊಡ್ಡ ಹಗರಣಗಳಿಂದಾಗಿ ಬಡಜನತೆ ತನಗರಿವಿಲ್ಲದೇ ಅದರ ಆಳ ಸುಳಿಗೆ ಸಿಲುಕಿ ನರಳುತ್ತಿದೆ. ಇದರ ನಿವಾರಣೆ ಹೇಗೆಂಬ ಬಗ್ಗೆ ಇಲ್ಲಿ ಜನಸಾಮಾನ್ಯರಿಗೊಂದು ಅಮೂಲ್ಯ - ಅಗತ್ಯ ವಿವರಣೆ ಲಭ್ಯವಿದೆ.