Product Description
ಇಂದಿನ ವರ್ತಮಾನದ ಆಧುನಿಕ ಜಗತ್ತಿನ ಹಲವರ ಪಾಲಿಗೆ ನನ್ನ ತಲೆಮಾರಿನ ಲೇಖಕರು ಗ್ರಾಮಭಾರತದ ಕುರಿತು ಮಾತನಾಡುವುದು, ಬರೆಯುವುದು ಸಿನಿಕತನವೆಂಬಂತೆ ತೋರುತ್ತಿದೆ. ಆದರೆ, ಗ್ರಾಮಭಾರತದ ಸಂಸ್ಕೃತಿಯೊಂದಿಗೆ ಹುದುಗಿ ಹೋಗಿರುವ ತಾಯ್ತನದ ಬೇರಿನ ಪರಿಚಯವಿಲ್ಲದ ಹಾಗೂ ಮುಚ್ಚಿದ ಬಾಗಿಲ ಸಂಸ್ಕೃತಿಯೊಳಗೆ ಬೆಳೆದು ಬಂದಿರುವ, ಎಂದಿಗೂ ಹೆತ್ತ ತಾಯಿಯ ಎದೆ ಹಾಲು ಕುಡಿಯದೆ ಬೆಳೆದಿರುವವರು ಗ್ರಾಮ ಭಾರತವನ್ನು ಸಿನಿಕತನದಿಂದ ನೋಡುತ್ತಾರೆ. ಹಂದ್ರಾಳರ ಈ ‘ಮರೆತ ಭಾರತ’ ಕೃತಿಯಲ್ಲಿ ಈವರೆಗೆ ಭಾರತದ ಅಕ್ಷರ ಜಗತ್ತಿನಲ್ಲಿ ದಾಖಲಾಗದೆ ಉಳಿದ ಹಾಗೂ ಆಧುನಿಕ ನಾಗರಿಕ ಸಂಸ್ಕೃತಿಗೆ ಅಸ್ಪೃಶ್ಯರಂತೆ ಕಾಣುವ ಅನಕ್ಷರಸ್ಥ ಸಮುದಾಯದ ಪ್ರತಿನಿಧಿಗಳು ಹಂದ್ರಾಳರ ನೆನಪುಗಳಲ್ಲಿ ನಾಯಕರಾಗಿ ವಿಜೃಂಭಿಸಿದ್ದಾರೆ. ಹಸಿವು, ಬಡತನ, ಜಾತಿ ಮತ್ತು ಅಪಮಾನಗಳ ಅಗ್ನಿಕುಂಡದಲ್ಲೂ ಹಿಂದಿನ ಗ್ರಾಮೀಣ ಬದುಕು ಹೇಗೆ ನಳನಳಿಸುತ್ತಾ ಸಂಪದ್ಭರಿತವಾಗಿತ್ತೆಂಬುದು ಈ ಕೃತಿಯ ಪುಟಪುಟದಲ್ಲೂ ಪ್ರಕಟಗೊಂಡಿದೆ. ಭಾರತದ ಸಾಹಿತ್ಯ ಸಂದರ್ಭದಲ್ಲಿ ಈ ಕೃತಿ ಅನನ್ಯವಾದದ್ದೆಂದೆ ನನ್ನ ಅಚಲವಾದ ನಂಬಿಕೆ.