Quantity
Product Description
ಹಸಿಬಿಸಿ ಸುದ್ದಿಗಳಿಗಿಂತ, ಆ ಸುದ್ದಿಯನ್ನು ಪರಿಣತರ ಕಣ್ಣಲ್ಲಿ ನೋಡುವುದು ಹೆಚ್ಚು ಇಷ್ಟ. ಇರಾನ್ ಮತ್ತು ಅಮೆರಿಕದ ನಡುವಿನ ಸಂಗ್ರಾಮವನ್ನು ನಾನು ಕಂಡದ್ದು ನಮ್ಮ ನಡುವಿನ ಅತ್ಯುತ್ತಮ ಜಿಯೋಪಾಲಿಟಿಕಲ್ ಅನಲಿಸ್ಟ್ ಗೋಪಾಲಕೃಷ್ಣ ಕುಂಟಿನಿಯ ಟಿಪ್ಪಣಿಗಳಲ್ಲಿ, ಅದರ ಒಳಸುಳಿಗಳನ್ನು ಅರ್ಥಮಾಡಿಕೊಂಡದ್ದು ಕುಂಟಿನಿ ಬರೆಯುತ್ತಿದ್ದ ವಿಶ್ಲೇಷಣಾತ್ಮಕ ಬರಹಗಳಲ್ಲಿ.
ಒಂದು ದೇಶವನ್ನು ಹೊಕ್ಕು, ಅಲ್ಲಿಯ ಸಂಸ್ಕೃತಿ, ಪರಿಸ್ಥಿತಿ, ದಿವಾಳಿತನ, ಹುಂಬತನ, ಕೆಚ್ಚು ಮತ್ತು ಹುಚ್ಚನ್ನು ಅರ್ಥಮಾಡಿಕೊಳ್ಳುವುದು ಸುಲಭವಲ್ಲ. ನಾಲ್ಕು ಪತ್ರಿಕೆ ಓದಿ, ಎಂಟು ಟೀವಿ ಚಾನಲ್ಲು ನೋಡಿ ಇಂಥದ್ದೊಂದು ಪುಸ್ತಕ ಬರೆಯುವುದು ಸಾಧ್ಯವಿಲ್ಲ. ಗೋಪಾಲಕೃಷ್ಣ ಕುಂಟಿನಿ ಇರಾನಿನೊಳಗೆ ಹೊಕ್ಕು ಬಂದ ಅಂಡರ್ಕವರ್ ಏಜಂಟಿನಂತೆ ಆ ದೇಶದ ಮಿಲಿಟರಿ ಆಲೋಚನೆಗಳನ್ನು, ವರ್ತಮಾನದ ವಿದ್ಯಮಾನಗಳನ್ನು, ರಾಜಕೀಯ ಜಾಯಮಾನವನ್ನು ಅರಿತು ಬರೆದಿರುವ ಪುಸ್ತಕ ಇದು.
ಯುದ್ಧ, ಜೂಜು ಮತ್ತು ಕ್ರಿಕೆಟ್ ಮಾತು ಬಂದಾಗ ಸಾಮಾನ್ಯವಾಗಿ ಮನಸ್ಸು ಒಂದು ದಿಕ್ಕಿಗೆ ಸೆಳೆಯಲ್ಪಡುತ್ತದೆ. ಯಾರದ್ದೋ ಪರ ನಿಲ್ಲುವಂತೆ ಬುದ್ಧಿ ಒತ್ತಾಯಿಸುತ್ತದೆ. ಎಲ್ಲ ತರ್ಕಗಳನ್ನು ಬದಿಗಿಟ್ಟು ವ್ಯಸನಕೋರನಂತೆ, ಯುದ್ಧಾಂಧನಂತೆ ಬರೆಯುವ ಆಸೆಯಾಗುತ್ತದೆ. ಈ ಪುಸ್ತಕ ಬರೆಯುವ ಹೊತ್ತಿಗೆ ತಕ್ಕಡಿ ಎತ್ತಲೂ ಬಾಗಿಲ್ಲ, ಯಾವುದನ್ನೂ ಕುಂಟಿನಿ ಮಮಕಾರದಲ್ಲಿ ತೂಗಿಲ್ಲ. ಅಡ್ಡಗೋಡೆಯ ಮೇಲೆ ದೀಪ ಇಟ್ಟಿಲ್ಲ, ಹೇಳಬೇಕಾದ ಮಾತುಗಳನ್ನು ಆಡದೇ ಬಿಟ್ಟಿಲ್ಲ.
ಇಲ್ಲಿ ಇರಾನ್ ದಿಟ್ಟತನ, ಕ್ರೌರ್ಯ, ಪಿತೂರಿ ಎಲ್ಲವೂ ದಾಖಲಾಗಿದೆ. ಇರಾನ್ ನಡೆಸುತ್ತಿರುವ ಹೋರಾಟ ಕೇವಲ ಪ್ರತಿಕ್ರಿಯೆ ಮಾತ್ರ ಅಲ್ಲ, ಪ್ರತಿಭಟನೆ ಕೂಡ. ಇರಾನ್ ತೋರುತ್ತಿರುವ ಸಿಟ್ಟಿನ ಮೂಲ ಅದರ ಸಂಪತ್ತನ್ನಷ್ಟೇ ಆಧರಿಸಿಲ್ಲ, ಸ್ವಾಭಿಮಾನದ ಹೇಳಿಕೆಯೂ ಆಗಿದೆ ಎಂಬುದನ್ನು ಈ ಪುಸ್ತಕ ಮನದಟ್ಟು ಮಾಡುತ್ತದೆ.
ನಮ್ಮ ಕಾಲದ ಯುದ್ಧವನ್ನು ನಮಗೆ ತೋರಿಸುತ್ತಿರುವ ಈ ಸಂಜಯ ಗೋಪಾಲಕೃಷ್ಣ ಕುಂಟಿನಿಗೆ ಥ್ಯಾಂಕ್ಸ್.
Binding
Soft Bound
Author
Gopalakrishna Kuntini
ISBN-13
9788168546523
Number of Pages
112
Publisher
Sawanna Enterprises
Publication Year
2026
Height
1 CMS
Length
22 CMS
Weight
200 GMS
Width
14 CMS
Language
Kannada