Product Description
70-80ರ ದಶಕದಿಂದೀಚೆಗೆ ಹೇರಳವಾಗಿ ದಲಿತ ಸಾಹಿತ್ಯ ರಚಿತವಾಗುತ್ತಿರುವಾಗ ಅದರ ಸ್ವರೂಪ, ನೆಲೆ, ಆಶಯ, ಭಾಷಾ ಬಳಕೆ ಇತ್ಯಾದಿಗಳ ಕುರಿತು ಮಾತನಾಡುವುದು ಆಗಿಗಿಂತ ಸುಲಭ. ಈ ಎಲ್ಲ ವರ್ಷಗಳ ದಲಿತ ಬರವಣಿಗೆಯನ್ನು ಅವಲೋಕಿಸಿದ ನಂತರ ಇಷ್ಟು ಮಾತ್ರ ಹೇಳಬಹುದು: ಅದುವರೆಗೆ ಪ್ರಚಲಿತದಲ್ಲಿದ್ದ ವಿಮರ್ಶೆಯ ಮಾನದಂಡಗಳು ಹಾಗೂ ಮೀಮಾಂಸೆಯಿಂದ ದಲಿತ ಸಾಹಿತ್ಯವನ್ನು ಅಳೆಯಲು ಸಾಧ್ಯವಿರಲಿಲ್ಲ. ಎಂದೇ ದಲಿತ ಸಾಹಿತ್ಯಕ್ಕಾಗಿ ಬೇರೆಯೇ ಆದ ಮೀಮಾಂಸೆ, ಸೌಂದರ್ಯ ಶಾಶ್ತ್ರವನ್ನು ರೂಪುಗೊಳಿಸಿಕೊಳ್ಳಬೇಕಾದ ಅವಶ್ಯಕತೆ ಉಂಟಾಯಿತು. ಹೀಗೆ ರೂಪುಗೊಂಡ ದಲಿತ ಸಾಹಿತ್ಯ ಸೌಂದರ್ಯ ಶಾಸ್ತ್ರ ದಲಿತ ಸಾಹಿತ್ಯವನ್ನಷ್ಟೇ ಅಲ್ಲ, ಒಟ್ಟಾರೆ ಸಾಹಿತ್ಯವನ್ನೇ ದಲಿತ ದೃಷ್ಟಿಕೋನದಲ್ಲಿ ನೋಡುವ ಹೊಸ ಪರಿಪಾಠವನ್ನು ಬೆಳೆಸಿತು.
ಇದು ಕನ್ನಡದಲ್ಲಷ್ಟೇ ಅಲ್ಲ, ಇತರ ಭಾರತೀಯ ಭಾಷೆಗಳಲ್ಲೂ ಸಂಭವಿಸಿದೆ. ರೊಮ್ಯಾಂಟಿಕ್ ಮತ್ತು ಗದ್ಗದಿತ ಸಾಹಿತ್ಯವನ್ನೇ ಬಹುಪಾಲು ಹೊಂದಿದೆ ಎಂದು ಹೇಳಲಾಗುವ ಹಿಂದಿ ಭಾಷೆಯು ದಲಿತ ಸಾಹಿತ್ಯವನ್ನೊಳಗೊಳ್ಳಲು ತೀವ್ರ ಸಂಘರ್ಷ, ಸಂಧಾನ ತೋರಿಸಿದೆ.
ಇಂಥ ಎಲ್ಲ ವಿಷಯಗಳ ಕುರಿತು ಹಿಂದಿಯ ಖ್ಯಾತ ಕವಿ, ಬರಹಗಾರ ಓಮ್ ಪ್ರಕಾಶ್ ವಾಲ್ಮೀಕಿ ‘ದಲಿತ ಸಾಹಿತ್ಯ ಸೌಂದರ್ಯ ಶಾಸ್ತ್ರ’ ಎಂಬ ಈ ಪುಸ್ತಕದಲ್ಲಿ ವಿಸ್ತೃತವಾಗಿ ಚರ್ಚಿಸಿದ್ದಾರೆ. ಇದನ್ನು ಕನ್ನಡಕ್ಕೆ ಶ್ರೀ ಆರ್.ಪಿ. ಹೆಗಡೆಯವರು ಅನುವಾದಿಸಿದ್ದಾರೆ.