Product Description
ನೋಡಲು ಕಿಲಾಡಿ ಹುಡುಗನಂತೆ ಕಾಣುವ ಹೊಳೆವ ಕಣ್ಣುಗಳ ತೇಜೋಮಯ ತರುಣ; ಬಡರೋಗಿಗಳನ್ನು, ಕೃಷಿಕರನ್ನು, ಗಣಿ ಕೆಲಸಗಾರರನ್ನು ಕಂಡು ಅವರಿಗಾಗಿ ಏನಾದರೂ ಮಾಡಲೇಬೇಕೆಂದು ಪಣತೊಟ್ಟ ವೈದ್ಯ; ಬದುಕಿನ ಕೊನೆಯ ಕ್ಷಣಗಳಲ್ಲಿ ಬೊಲಿವಿಯನ್ ಪರ್ವತಗಳಲ್ಲಿ ಅಲೆದಾಡುವಾಗ ತನ್ನ ಒರಟು ಉಣ್ಣೆಯ ಬ್ಯಾಗಿನಲ್ಲಿ ಆಯುಧಗಳ ಜೊತೆ ನೆರೂಡನ ಕ್ಯಾಂಟೋ ಜನರಲ್ ಕವಿತೆ ಪುಸ್ತಕ ಇಟ್ಟುಕೊಂಡ ಕಾವ್ಯಪ್ರೇಮಿ; ಒಂದು ದೇಶದಲ್ಲಿ ಹುಟ್ಟಿ, ಮತ್ತೊಂದು ದೇಶಕ್ಕಾಗಿ ಹೋರಾಡಿ, ಮಗದೊಂದು ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣವೊಪ್ಪಿಸಿದ ಹೋರಾಟಗಾರ: ಬದುಕಿದ ೩೯ ವರ್ಷಗಳಲ್ಲಿ ವಿಶ್ವದ ಮುಕ್ಕಾಲು ದೇಶಗಳ ಸಂದರ್ಶಿಸಿದ ಜಂಗಮ; ಜಗತ್ತಿನ ಅಸಂಖ್ಯ ಜನರ ಸ್ಫೂರ್ತಿ;
ಅವ ಅರ್ನೆಸ್ಟೋ ಗೆವಾರಾ ಡಿ ಲಾ ಸೆರ್ನಾ. ಸಂಕ್ಷಿಪ್ತವಾಗಿ ಚೆಗೆವಾರ. ಪ್ರೀತಿಯಿಂದ ಚೆ..
ಇಲ್ಲಿ ಅನುವಾದಿಸಲಾಗಿರುವ ‘ಮೋಟಾರ್ ಸೈಕಲ್ ಡೈರೀಸ್’ ಅವನ ಎರಡನೆಯ ತಿರುಗಾಟದ ಅನುಭವವನ್ನು ಟಿಪ್ಪಣಿಯ ರೂಪದಲ್ಲಿ ಹೊಂದಿರುವಂಥದು. ೧೯೫೧ರ ಅಕ್ಟೋಬರಿನಿಂದ ಅರ್ಜೆಂಟೀನಾ, ಚಿಲಿ, ಪೆರು, ಈಕ್ವೆಡಾರ್, ಕೊಲಂಬಿಯಾ, ವೆನಿಜುವೆಲಾ, ಪನಾಮಾ ಮತ್ತು ಮಿಯಾಮಿಗಳಲ್ಲಿ ಸುತ್ತಾಡಿ ಅಲ್ಲಿಂದ ಮನೆಗೆ ವಾಪಸಾದ ಅವನ ತಿರುಗಾಟದ ಅನುಭವ ಈ ಪುಸ್ತಕ. ಈ ಕೃತಿ ಕೆಲವೆಡೆ ಲವಲವಿಕೆಯಿಂದ ಓದಿಸಿಕೊಂಡೂ ಹೋಗುತ್ತದೆ. ಮತ್ತೆ ಕೆಲವೆಡೆ ಅವರು ಎಲ್ಲಿ ಹತ್ತಿ ಎಲ್ಲಿ ಇಳಿದರು ಎಂದು ತಿಳಿಯದೇ ಗೊಂದಲಗೊಳಿಸುತ್ತದೆ. ಕೆಲ ಐತಿಹಾಸಿಕ ಸ್ಥಳದ ವಿವರಗಳೂ ಅಸ್ಪಷ್ಟ ಹಾಗೂ ಅಪೂರ್ಣವಾಗಿದೆ. ಬಹುಶಃ ಸ್ಪ್ಯಾನಿಶ್ ಹೆಸರುಗಳಿರುವ ಆ ಸ್ಥಳಗಳ ಕುರಿತ ನಮ್ಮ ಅಪರಿಚಿತತೆ ಅದಕ್ಕೆ ಕಾರಣವಿರಬಹುದು. ಆದರೆ ವಿವರಗಳು ಪೇಲವ ಅನಿಸುವ ಹೊತ್ತಿಗೆ ಮಿಂಚಿನಂತೆ ಎದೆಯಾಳದ ಒಂದೆರಡು ಸಾಲುಗಳನ್ನು ಹೊಳೆಯಿಸಿಬಿಡುವ ಚೆ ನಿರೂಪಣೆಗೆ ಜೀವ ತುಂಬುತ್ತಾನೆ. ಅವರ ತರುಣ ಹುಮ್ಮಸ್ಸು ಮತ್ತು ಚೈತನ್ಯ ಓದುಗನಲ್ಲೂ ಜೀವ ಸಂಚಲನ ಉಂಟುಮಾಡುತ್ತದೆ. ಅದಕ್ಕೆ ಹುಂಬತನದ ನಡುವೆ ಮಿಂಚುವ ಎದೆಯಾಳದ ಎರಡು ಸಾಲುಗಳಾಗಿ ಚೆ ನಿಮ್ಮ ಮುಂದಿದ್ದಾನೆ.