Product Description
ಇತಿಹಾಸದಿಂದ ಕಾಣೆಯಾಗಿರುವ ಹೆಣ್ಣಿನ ದನಿಯ ಪಲುಕುಗಳನ್ನು ವಿವಿಧ ನೆಲೆಗಳಿಂದ ಶೋಧಿಸುವ ಕಾರ್ಯ ಈಗ ನಡೆಯುತ್ತಿದೆ. ಅದರಲ್ಲೂ ಇತ್ತೀಚಿನ ವರ್ಷಗಳಲ್ಲಿ ಮಹಿಳಾ ಪ್ರಜ್ಞೆ ಹರಳುಗಟ್ಟುವುದರ ಜೊತೆಜೊತೆಗೆ ಮಹಿಳಾ ದೃಷ್ಟಿಕೋನವನ್ನು ಪರಿಗಣಿಸಲೇಬೇಕಾದ ಅನಿವಾರ್ಯತೆಗೂ ಮಾನವ ಸಮಾಜ ಬಂದು ನಿಂತಿದೆ. ಭಾರತೀಯ ಮಹಿಳಾ ಹೋರಾಟದ ಚರಿತ್ರೆ, ಮಹಿಳಾ ಸಾಹಿತ್ಯ ಚರಿತ್ರೆಗಳು ಕೂಲಂಕಶ ಅಧ್ಯಯನಕ್ಕೊಳಗಾಗುವ ಸ್ತ್ಯುತ್ಯರ್ಹ ಕೆಲಸವಾಗುತ್ತಿರುವ ಹೊತ್ತಿನಲ್ಲಿ ವರ್ತಮಾನದ ಮಹಿಳಾ ಹೋರಾಟದ ವಿವಿಧ ಮಗ್ಗುಲುಗಳನ್ನೂ, ಪ್ರಯತ್ನಗಳನ್ನೂ ದಾಖಲಿಸುವ ಅಗತ್ಯವಿದೆ.
ಪ್ರಸ್ತುತ ಕೃತಿಯಲ್ಲಿ ವಿಚಾರ ಸಂಕಿರಣ ಹಾಗೂ ಸಮಾವೇಶ ಸಂದರ್ಭದ ನುಡಿಗಳನ್ನು ಬರಹರೂಪದಲ್ಲಿ ಸಂಕಲಿಸಿ ದಾಖಲಿಸಲಾಗಿದೆ. ಗತ ಹಾಗೂ ಭವಿಷ್ಯದ ಮಧ್ಯೆ ನಿಂತ ನಮ್ಮ ಹೋರಾಟದ ಅನುಭವಗಳು ಕಾಲದ ಕಠೋರ ಸತ್ಯಕ್ಕೆ ಒಳಗಾಗಿ ಲಯವಾಗಿ ಹೋಗದಿರಲೆಂಬ ಕಾಳಜಿಯಿಂದ ಅವುಗಳನ್ನು ದಾಖಲಿಸುವುದೇ ಈ ಕೃತಿ ಪ್ರಕಟನೆಯ ಒತ್ತಾಸೆಯಾಗಿದೆ. ದಿನದಿನಕ್ಕೂ ಮಹಿಳೆಯರ ಸಮಸ್ಯೆಗಳು ಹೊಸ ಹೊಸ ರೂಪ ತಾಳುತ್ತಿರುವ ಸಂದರ್ಭದಲ್ಲಿ ಮಹಿಳಾ ಹೋರಾಟಕ್ಕೆ ಹೊಸ ಬಿಕ್ಕಟ್ಟು ಸವಾಲುಗಳು ಎದುರಾಗುತ್ತಿವೆ. ಇವುಗಳನ್ನು ಎದುರಿಸಲು, ಚರಿತ್ರೆಯಾಗಿ ದಾಖಲಾದ ಮಹಿಳಾ ಹೋರಾಟಗಳ ನೆನಪುಗಳು ಅತ್ಯಮೂಲ್ಯ ಆಕರ ಸಾಮಗ್ರಿ ಸಾಧನಗಳಾಗುತ್ತವೆ.
ಹೀಗೆ, ಮಂಗಳೂರಿನಲ್ಲಿ ನಡೆದ ಒಕ್ಕೂಟದ ಮಹಿಳಾ ದಿನಾಚರಣೆಯ ಸ್ಮೃತಿ ಸಂಚಯ ‘ಇನ್ನು ಸಾಕು’ ಕೃತಿಯ ಹೆಜ್ಜೆ ಗುರುತಿನ ಹಾದಿಯನ್ನೇ ಅನುಸರಿಸಿ ಈ ಕೃತಿ ಸಂಪಾದಿತವಾಗಿದೆ. ಹೋರಾಟದ ಪಥದಲ್ಲಿನ ತಪ್ಪು-ಉಪ್ಪು, ಸಾಧಕ-ಬಾಧಕಗಳ ವಿಮರ್ಶೆ, ವಿಶ್ಲೇಷಣೆಗೆ ಬೇಕಾದ ಮಹಿಳಾ ಹೋರಾಟದ ಚರಿತ್ರೆಯ ನಿರ್ಮಿತಿಗೆ ‘ಸಾಕಾರದತ್ತ ಸಮಾನತೆಯ ಕನಸು’ ಕೃತಿಯು ಕಾಣಿಕೆ ಸಲ್ಲಿಸೀತೆಂಬ ಸದಾಶಯ ನಮ್ಮದು.