Product Description
ಹಿಂಸೆಯ ಕುರಿತು ಲೇಖಕನಿಗೆ ಇರುವ ಕಳವಳವೇ ಪ್ರಸ್ತುತ ಸಂಕಲನದ ಎಲ್ಲ ಕಥೆಗಳಿಗೂ ಇರುವ ಸಮಾನ ಗುಣ. ಧರ್ಮ, ಸಂಸ್ಕೃತಿ, ನಾಗರಿಕತೆ ಸಭ್ಯತೆ ಮೊದಲಾದ ಸಮಾಜದ ಮುಖವಾಡಗಳ ಹಿಂದೆ ಅಡಗಿರುವ ಹಿಂಸೆಯನ್ನು ಅರ್ಷಾದ್ ತನ್ನ ಕಥೆಗಳಲ್ಲಿ ಅದರ ನಿಜ ಸ್ವರೂಪದಲ್ಲಿ ಗುರುತಿಸುತ್ತಾರೆ. ಅರ್ಷಾದ್ ಅವರ ಕಥೆಗಳಲ್ಲಿ ನಮಗೆ ಎದುರಾಗುವ ಹಳ್ಳಿ ಪಟ್ಟಣಗಳು, ನಮಗೆ ಪರಿಚಿತವಾಗಿರುವಂತಹವೇ. ಆದರ ಅವುಗಳ ಕ್ರೌರ್ಯ ಮತ್ತು ಕುರೂಪ ನಮ್ಮನ್ನು ಬೆಚ್ಚಿಬೀಳಿಸುತ್ತವೆ. ನಾವು ಕೂಡ ಭಾಗವಾಗಿರುವ ನಮ್ಮ ಸಮಾಜದ ಸೋಗಲಾಡಿತನದ ಹಿಂದೆ ಇರುವ ಕ್ರೌರ್ಯದ ವಿವಿಧ ಆಯಾಮಗಳನ್ನು ಲೇಖಕ ಈ ಕಥೆಗಳ ಮುಖಾಂತರ ನಮಗೆ ಕಾಣಿಸುತ್ತಾರೆ; ಮತ್ತು ಮನವರಿಕೆ ಮಾಡಿಕೊಡುತ್ತಾರೆ. ಲೈಂಗಿಕ ಶೋಷಣೆ, ಆರ್ಥಿಕ ಶೋಷಣೆ, ವರ್ಣಬೇಧ, ಲಿಂಗ ಅಸಮಾನತೆ - ಹೀಗೆ ಅಸಹಾಯಕತೆ ವ್ಯಕ್ತವಾಗುವ ಎಲ್ಲ ಸಂದರ್ಭಗಳೂ ಇಲ್ಲಿ ಕಥಾವಸ್ತುಗಳಾಗಿವೆ. ಅದರಲ್ಲೂ ಮುಖ್ಯವಾಗಿ, ನಮ್ಮ ಸಮಾಜದ ಎಲ್ಲ ಜಾತಿ ಮತ್ತು ಎಲ್ಲ ವರ್ಗಗಳ ಮಹಿಳೆಯರ ಅಸಹಾಯಕ ಸ್ಥಿತಿ, ಸಂಕಲನದ ಹೆಚ್ಚಿನ ಕಥೆಗಳ ಕೇಂದ್ರ ಕಾಳಜಿಯಾಗಿದೆ. ಆರ್ಥಿಕ ಶೋಷಣೆಯನ್ನು ಎದುರಿಸಲು ಸಂಘಟನೆ ಮತ್ತು ಪ್ರತಿಭಟನೆಗಳ ರಾಜಮಾರ್ಗವಿದೆ. ಆದರೆ ಲಿಂಗ ಅಸಮಾನತೆ ಮತ್ತು ಲೈಂಗಿಕ ಶೋಷಣೆಗಳಿಗೆ ಮೂಕ ಬಲಿಯಾಗಿರುವ ಮಹಿಳೆಯರಿಗೆ ಈ ಸಮಾಜದಲ್ಲಿ ಬಿಡುಗಡೆಯ ಹೊರದಾರಿಗಳೇ ಇಲ್ಲ. ಧಾರ್ಮಿಕ ಸೋಗಲಾಡಿತನ, ಅಸಹಜವೂ ಜೀವ ವಿರೋಧಿಯೂ ಆಗಿರುವ ಬ್ರಹ್ಮಚರ್ಯದ ಪ್ರತಿಪಾದನೆ, ಸಹಜ ಬಯಕೆಗಳ ಬಲಾತ್ಕಾರದ ಹತ್ತಿಕ್ಕುವಿಕೆ, ವಿಕೃತ ಕಾಮ - ಅರ್ಷಾದ್ ಅವರ ಕಥೆಗಳ ನೇಯ್ಗೆಯಲ್ಲಿ ಇವೆಲ್ಲವೂ ಹಾಸುಹೊಕ್ಕಾಗಿ ಸೇರಿಕೊಂಡು ನಾವು ಇದುವರೆಗೆ ನೋಡಿದರೂ ಕಾಳಜಿ ವಹಿಸದ ಹಿಂಸೆ ಮತ್ತು ನೋವಿನ ವಿವಿಧ ಬಗೆಗಳನ್ನು ಚಿತ್ರಿಸುತ್ತದೆ.