Quantity
Product Description
ಭಾರತವೂ ಸೇರಿದಂತೆ ಇಡೀ ವಿಶ್ವದಲ್ಲಿ ನೂರಾರು ರಾಮಾಯಣಗಳಿವೆ. ಬಹುಶಹ ಹಾಗಾಗಿಯೇ ನಮ್ಮ ಪೂರ್ವಸೂರಿಕವಿ ಕುಮಾರವ್ಯಾಸರು" ತಿಣುಕಿದನು ಫಣಿರಾಯ ರಾಮಾಯಣದ ಕವಿಗಳ ಭಾರತದಲ್ಲಿ ತಿಂತಿಣಿಯ ರಘುವರ ಚರಿತ್ರೆಯಲಿ ಕಾಲಿಡಲು ತೆರಪಿಲ್ಲ..."(ಭಾರತ, ಆದಿಪರ್ವ, ಸಂಧಿ, 17 ಪದ್ಯ.) ಎಂದು ಹೇಳಿದ್ದು! ಇಂದಿಗೂ ರಾಮಾಯಣಗಳು ಹಲವು ರೀತಿಗಳಲ್ಲಿ ಪ್ರಕಟಗೊಳ್ಳುತ್ತಲೇ ಇವೆ. ಆ ಸಾಲಿಗೆ ಪುಂಡಲೀಕ ಕಲ್ಲಿಗನೂರ ಅವರ " ಶಿಲ್ಪಕಲೆಯಲ್ಲಿ ರಾಮಾಯಣ " (2025) ಒಂದು ಹೊಸ ಸೇರ್ಪಡೆ. ಆದರೆ ಇದು ಅಪೂರ್ವ ಎನ್ನಬಹುದಾದ ವಿಶಿಷ್ಟ ಪುಸ್ತಕ. ಏಕೆಂದರೆ ಬಹುಶಹ ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ರಾಮಾಯಣದ ಕಥಾನಕ (narrative) ಶಿಲ್ಪಗಳನ್ನು ಅತಿಸುಂದರವಾಗಿ ಪಠ್ಯದೊಂದಿಗೆ ಪರಸ್ಪರವಾಗಿಸಲಾಗಿದೆ. ಪುಂಡಲೀಕರ ಮುಂಬರಲಿರುವ ಮಹಾಭಾರತ, ಭಾಗವತಗಳ ಶಿಲ್ಪಕಲೆಯ ಸಂಪುಟಗಳಿಗೆ ಅಂಕುರಾರ್ಪಣದಂತೆ ಮೊದಲಿಗೆ ರಾಮಾಯಣ ಶಿಲ್ಪ ಕಥಾನಕದ ಈ ಪುಸ್ತಕ ಪ್ರಕಟವಾಗಿದೆ.
ಬಹುತೇಕ ಹೊಯ್ಸಳರ ದೇವಾಲಯ ಶಿಲ್ಪಗಳಿಂದ ಆಯ್ಕೆಗೊಂಡ ಶಿಲ್ಪಗಳಿವು. ಜೊತೆಗೆ ಬಹು ಮುಖ್ಯವಾಗಿ ವಿಜಯನಗರ ಶೈಲಿಯ ಹಂಪಿ, ಶೃಂಗೇರಿ ದೇವಾಲಯಗಳ ರಾಮಾಯಣ ಶಿಲ್ಪಗಳು ಸೇರ್ಪಡೆಗೊಂಡಿವೆ. ಹಳೇಬೀಡು, ಸೋಮನಾಥಪುರ, ಕೇದಾರೇಶ್ವರ, ಹೊಸ ಹೊಳಲು, ಜಾವಗಲ್ಲು, ಬಸರಾಳು, ಅದ್ಭುತೇಶ್ವರ, ನುಗ್ಗೆಹಳ್ಳಿ, ಗೋವಿಂದನಹಳ್ಳಿ ದೇವಾಲಯಗಳ, ಬಹುತೇಕ ಹೊರಗಿನ ಭಿತ್ತಿಗಳ ಶಿಲ್ಪಗಳನ್ನು ಇಲ್ಲಿ ಆರಿಸಿಕೊಳ್ಳಲಾಗಿದೆ. ಈ ಆಯ್ಕೆಗಳು ಹೊಯ್ಸಳ ಶಿಲ್ಪಿಗಳ ಆತಿತೀವ್ರತೆಯ ಕರಕುಶಲತೆ ಮತ್ತು ರೂಪಕಲ್ಪನಾ ಸಾಮರ್ಥ್ಯಗಳನ್ನು ಬಿಂಬಿಸುತ್ತವೆ. ಶೃಂಗೇರಿ ಗಿಂತಲೂ ಹಂಪಿಯ ಹಜಾರರಾಮ ದೇವಾಲಯದ ರಾಮಾಯಣ ಕಥಾನಕದ ಉಬ್ಬು ಶಿಲ್ಪಗಳು ಗಣನೀಯವಾಗಿ ಕಾಣಿಸಿಕೊಂಡಿದೆ.
ಶಿಲ್ಪ ಮತ್ತು ಅಕ್ಷರಗಳ ಸುಂದರ ಸಹವಾಸದ ಈ ಪುಸ್ತಕದಲ್ಲಿ ರಾಮಾಯಣದ ಏಳು ಕಾಂಡಗಳ ವಿವರಗಳು ಶಿಲ್ಪಗಳಿಗೆ ಪೂರಕವಾಗಿವೆ. ಮೊದಲ ಮತ್ತು ಅಂತಿಮ ಕಾಂಡಗಳ ಕುರಿತ ಅಂಶಗಳು ಗಮನಾರ್ಹ. ಮುಖ್ಯ ಪಾತ್ರಗಳ ವಿವರ ರಾಮಾಯಣದ ಪ್ರಾರಂಭದ ಕಥಾನಕದ ನಂತರ ನಮ್ಮ ಪಾರಂಪರಿಕ ದೇವಾಲಯ ವಾಸ್ತುವಿನಲ್ಲಿ ಹುದುಗಿಕೊಂಡ ಶಿಲ್ಪಗಳನ್ನು ನೋಡುಗ/ ಓದುಗರಿಗೆ ಖುಷಿಯಾಗುವಂತೆ ವಿಶಿಷ್ಟ ಛಾಯಾಗ್ರಹಿತ ಚಿತ್ರಗಳು ರಾಮಾಯಣದ ದೃಶ್ಯಲೋಕವನ್ನು ನಮ್ಮ ಕಣ್ಣ ಮುಂದೆ ಬಿಂಬಿಸುತ್ತವೆ.
ಪುಂಡಲೀಕರ ಆಕರ್ಷಕ ರೇಖಾ ರಾಮಾಯಣದ ಚಿತ್ರಗಳೂ ಇವೆ. ಬಹುತೇಕ ಶಿಲ್ಪಸಂಕುಲವು ಹೊಯ್ಸಳರ ವಿಶಿಷ್ಟ ದೇವಾಲಯ ವಾಸ್ತುಶಿಲ್ಪ ಶೈಲಿಯ, ಪುಟ್ಟ ಪುಟ್ಟ, ಫಲಕ, ಪಟ್ಟಿಕೆಗಳಂತಹ ಕಥಾನಕ ಚಿಕಣಿಶಿಲ್ಪ (miniature sculpture) ಸಾಲುಗಳೆ ಆಗಿವೆ. ಈ ದೃಶ್ಯಲೋಕಗಳು, ಈ ಪುಸ್ತಕದಲ್ಲಿ, ನಮ್ಮ ಉತ್ತಮ ಛಾಯಾಚಿತ್ರಕಾರರಿಂದ ವೈಭವಿಕರಿಸಲ್ಪಟ್ಟಿವೆ. ಉದಾಹರಣೆಗೆ ಬೇಲೂರಿನ (ಪುಟ 67,68,70,71,73,) ಶಿಲ್ಪಫಲಕಗಳು ಇಲ್ಲಿ ನೆನಪಾಗುತ್ತವೆ. ಹಾಗೆಯೇ ಮಹಾಶಿವಭಕ್ತ ರಾವಣನ ಅಸಾಮಾನ್ಯ ರೂಪ, ರೇಖೆ, ಉಬ್ಬುಶಿಲ್ಪ ಕಲ್ಪನೆಗಳು ಪುಟ. 46 (ಹಳೇಬೀಡು), ಪುಟ 17 ರಿಂದ 27ರವರೆಗೆ (ಸೋಮನಾಥಪುರ) ಮತ್ತೆ ಮತ್ತೆ ನೋಡಿಸಿಕೊಳ್ಳುತ್ತವೆ. ಇದೇ ವಸ್ತುವಿನ ಹಲವು ರೀತಿಯ ಪುಟ್ಟ ಶಿಲ್ಪಗಳು ಪುಸ್ತಕದ ಹಲವೆಡೆ ಆಕರ್ಷಿಸುತ್ತವೆ. ಪುತ್ರ ಕಾಮೇಷ್ಠಿಯಾಗದ ಪುಟ್ಟಶಿಲ್ಪ ಸಂಯೋಜನೆಯ ದೃಶ್ಯಕಲ್ಪನೆಯು ಅತಿಸುಂದರ ಹಜಾರರಾಮ ದೇಗುಲದ ಭಿತ್ತಿಶಿಲ್ಪಗಳು, ವಿಜಯನಗರ ಶಿಲ್ಪಿಗಳ ಕುಶಲತೆ ಮತ್ತು ಕಲಾವಿಜ್ಞತೆಗೆ ಅತ್ಯುತ್ತಮ ಉದಾಹರಣೆಗಳಂತಿವೆ. ಯುದ್ಧವು ಕಾಲಾತೀತವಾಗಿ ಪ್ರಸ್ತುತವಾಗಿರುವಂತೆ ಕಾಣುತ್ತದೆ! ಇಂತಹ ಹತ್ತಾರು ಅಂಶಗಳಿರುವ ಶಿಲ್ಪಕಲೆಯ ಇತಿಹಾಸವನ್ನು ದಾಖಲಿಸುವ ಈ ಪುಸ್ತಕವು ಅವರ ಮುಂಬರಲಿರುವ ಇನ್ನೆರಡು ಸಂಪುಟಗಳಿಗೆ ನಾವು ಹೆಚ್ಚಿನ ನಿರೀಕ್ಷೆಯಿಂದ ಕಾಯುವಂತೆ ಮಾಡುತ್ತದೆ.
Author
Pundalika Kalliganuru
Binding
Hard Bound
ISBN-13
9789348355997
Number of Pages
300
Publication Year
2025
Publisher
Veeraloka Books Pvt Ltd
Height
5 CMS
Length
22 CMS
Weight
1000 GMS
Width
15 CMS
Language
Kannada