Product Description
ಪುಸ್ತಕದ ಬಗ್ಗೆಲೇಖಕರ ಬಗ್ಗೆ
ವರ್ತಮಾನದ ತನ್ನ ತಲ್ಲಣಗಳಿಗೆ ನೆನಪಿನ ಕೊಂಡಿಯನ್ನು ಬೆಸೆದು ಅದನ್ನು ಅನುಭವವಾಗಿಸಿಕೊಂಡು ಆ ಮೂಲಕ ತಾನೂ ತನ್ನ ಸುತ್ತಲಿನ ಜಗತ್ತೂ ಇರುವ ಪರಿಯನ್ನು ಅರ್ಥೈಸಿಕೊಳ್ಳಲು ಹೊರಡುವ ಕೆವೈಎನ್ ನಾಟಕಗಳ ನೋಟ ನೆಟ್ಟಿರುವುದು ನಾಳೆಯ ಕಡೆಗೆ. ಇತಿಹಾಸದುದ್ದಕ್ಕೂ ಹಾಸಿಕೊಂಡಿರುವ ಅರಿವುಗೇಡಿತನದಿಂದ ಆಗಿರುವ ಗಾಯಗಳಿಗೆ ‘ತಿಳಿವಿ’ನ ಮುಲಾಮನ್ನು ಹಚ್ಚಲು ಈ ನಾಟಕಗಳು ಪ್ರಯತ್ನಿಸುತ್ತವೆ. ಮನುಷ್ಯ ಕಳೆದುಕೊಂದಿರುವ ನೆಲ, ನೀರು ಮತ್ತು ಹೆಣ್ಣಿನ ಮಡಿಲುಗಳ ನಿರಂತರ ಹುಡುಕಾಟ ಇವುಗಳಲ್ಲಿವೆ. ಇವುಗಳ ಅಸ್ತಿತ್ವವನ್ನು ಅರಿಯುವುದೇ ಇವುಗಳನ್ನು ಪಡೆಯುವ ದಾರಿ. ಆದರೆ ಇವುಗಳಿಗಾಗಿ ಯುದ್ಧ ಮಾಡುವ, ಅಮಾಯಕರನ್ನು ಬಲಿಕೊಡೂವ ಅಹಂಕಾರದ ದಾರಿ ಹಿಡಿದಿರುವ ಮನುಷ್ಯನಿಗೆ ನೆಲ, ಜಲ, ಮತ್ತು ಹೆಣ್ಣೀನ ಕಣ್ಣನ್ನು ಹುಡುಕಿಕೊಡುವ ಕೆಲಸ ಮಾಡಲು ಈ ನಾಟಕಗಳು ಹಂಬಲಿಸುತ್ತಿವೆ.
ಈ ದಾರಿಗಳನ್ನು ಕಂಡುಕೊಳ್ಳಲು ಕೆವೈಎನ್ ಕನ್ನಡದ್ದೇ ಅರಿವಿನ ಜಗತ್ತಿನ ಮೊರೆ ಹೋಗುತ್ತಾರೆ. ಅದು ಪಂಪ, ಕುವೆಂಪು, ಜನಪದ, ತತ್ವಪದ ಯಾವುದೂ ಆದೀತು. ಹೀಗಾಗಿ ಅವರ ನಾಟಕಗಳು ಕೇವಲ ಮುರಿದು ಕಟ್ಟುವ ಕೆಲಸ ಮಾಡುತ್ತಿಲ್ಲ. ನಾವು ಹಿಡಿಯಬೇಕಾದ ಅರಿವಿನ ದಾರಿ ಯಾವುದಾಗಿರಬೇಕು ಎಂಬ ಸೂಚನೆಯನ್ನೂ ಅವು ನೀಡುತ್ತಿವೆ. ಹಾಗೆಂದ ಕೂಡಲೇ ಅವರು ಕನ್ನಡದಾಚೆಗಿನ ಲೋಕಗಳನ್ನು ನಿರಾಕರಿಸುತ್ತಿದ್ದಾರೆಂದಲ್ಲ. ಅವುಗಳನ್ನು ಕನ್ನಡದ ಕಣ್ಣಿನ ಮೂಲಕ ನೋಡುತ್ತಿದ್ದಾರೆಂದರ್ಥ. ಹೀಗಾಗಿ ಅವರಿಗೆ ಕಾಳಿದಾಸ ‘ನ್ಯಾಸ್ತನೆ’... ಎಂಬ ಈ ನೆಲದ ತೆಲುಗು ಹಾಡಿನ ಹಾದಿಯಲ್ಲಷ್ಟೇ ಸ್ಪಷ್ಟವಾಗಬಲ್ಲ. ಚಮ್ಮಾರ, ರಂಗಮ್ಮ, ಗಂಧರ್ವಕನ್ಯೆ,..ಯರು ಈ ಅರಿವಿನ ದಾರಿಯ ವಿಸ್ತರಣೆಗಳು.
ಅನಭಿಜ್ಞ ಶಾಕುಂತಲದ ಒಂದು ಮಾತು ಹೀಗಿದೆ: “ತಾನಲ್ಲದ್ದನ್ನು ಮಾತ್ರ ಮನುಷ್ಯ ಪ್ರೀತಿಸಬಲ್ಲ”. ತನ್ನನ್ನಷ್ಟೇ ಪ್ರೀತಿಸಿಕೊಳ್ಳುವ ರೋಗಕ್ಕೆ ತುತ್ತಾಗಿರುವ ನಮ್ಮ ಕಾಲಕ್ಕೆ ಈ ಮಾತು ನಾಟಬೇಕಾಗಿದೆ. ಈ ಸಂಕಲನದಲ್ಲಿ ಸೇರಿರುವ ಎಲ್ಲ ಬರಹಗಳೂ ಈ ತಿಳಿವಿನ ಸೆಲೆಯಿಂದಲೇ ಹೊರಡುವುದೊಂದು ವಿಶೇಷ.