Product Description
ತೆಲಂಗಾಣ ರೈತ ಹೋರಾಟ 1946ರಿಂದ 1951ರವರೆಗೆ ಆಂಧ್ರಪ್ರದೇಶದಲ್ಲಿ ಘಟಿಸಿದ ಚಾರಿತ್ರಿಕ ಆಂದೋಲನ. ಬ್ರಿಟಿಷ್ ಸಾಮ್ರಾಜ್ಯಶಾಹಿ, ನಿಜಾಮನ ಫ್ಯೂಡಲ್ ಆಳ್ವಿಕೆ ಮತ್ತು ಜೀವವಿರೋಧಿ ಭೂಮಾಲೀಕರ ವಿರುದ್ಧ ರೈತರು ನಡೆಸಿದ ಮಹಾವಿಪ್ಲವ ಇದು. ವ್ಯವಸ್ಥೆಯ ಅಧಿಕಾರ, ಅಹಂಕಾರ, ಅಂತಸ್ತು... ಇತ್ಯಾದಿಗಳ ಎದುರು ಸಾಮಾನ್ಯ ರೈತರು ತಮ್ಮ ಅಸ್ತಿತ್ವ ಹಾಗೂ ಆತ್ಮಗೌರವಕ್ಕಾಗಿ ನಡೆಸಿದ ಸುದೀರ್ಘ ಸಮರ. ಸರ್ವಾಧಿಕಾರ ಎನ್ನುವ ಪರ್ವತವನ್ನು ಛಿದ್ರಗೊಳಿಸಿದ ಸಾಮಾನ್ಯ ಜನರ ಆತ್ಮಬಲ ಇದು. ಈ ಹೋರಾಟ ತೆಲುಗುನಾಡಿನ ಚರಿತ್ರೆಯಲ್ಲಿ ಒಂದು ಉಜ್ವಲಘಟ್ಟ, ಚರಿತ್ರೆಯ ಈ ಹೋರಾಟಕ್ಕೆ ಮುಖಾಮುಖಿಯಾದವರು ಜನಸಾಮಾನ್ಯರು. ಹಾಗಾಗಿ ಇದು ನಿಜಚರಿತ್ರೆಯ ಅನಾವರಣ.
ಇಂಥ ಚಾರಿತ್ರಿಕ ಗ್ರಂಥವನ್ನು ಕಟ್ಟಿಕೊಟ್ಟವರು ಕಮ್ಯೂನಿಸ್ಟ್ ನೇತಾರ ಪಿ.ಸುಂದರಯ್ಯನವರು. ಈ ಕೃತಿಯಲ್ಲಿ ಸುಂದರಯ್ಯನವರು ವ್ಯವಸ್ಥೆಯ ಕ್ರೌರ್ಯ ಮತ್ತು ಹಿಂಸೆಗೆ ಎದುರಾದ ರೈತಾಪಿ ಸಮುದಾಯದ ಬದ್ಧತೆ, ತ್ಯಾಗ ಮತ್ತು ಕಮ್ಯೂನಿಸ್ಟ್ ಸಿದ್ಧಾಂತಗಳನ್ನೇ ಬದುಕಿದ ವೀರಗಾಥೆಗಳನ್ನು ಜೀವಂತವಾಗಿ ಚಿತ್ರಿಸಿದ್ದಾರೆ. ಚರಿತ್ರೆಯ ವಿದ್ಯಮಾನಗಳನ್ನು ಶ್ರಮಿಕರ ಮತ್ತು ಸಾಮಾನ್ಯರ ನೆಲೆಯಿಂದ ಶೋಧಿಸಿದ ಈ ಕೃತಿ ನಮ್ಮ ಅರಿವನ್ನು ವಿಸ್ತರಿಸುವ ಶಕ್ತಿಯನ್ನು ಹೊಂದಿದೆ.