ನಾವು ನಮ್ಮ ಸುತ್ತಮುತ್ತ ದಿನಾ ಕಾಣುವ ವ್ಯಕ್ತಿಗಳಲ್ಲಿ ಬಹುತೇಕ ಎಲ್ಲರೂ ನಮಗೆ ಅಪರಿಚಿತರಾಗಿಯೇ ಉಳಿಯುತ್ತಾರೆ. ಕೆಲವರನ್ನು 'ನಮ್ಮ ಪರಿಚಯದವರು' ಅಂತ ನಾವು ಹೇಳಿಕೊಂಡರೂ ಅವರ ನಿಜವಾದ ವ್ಯಕ್ತಿತ್ವ ಮತ್ತು ಬದುಕಿನ ಬಗ್ಗೆ ನಮಗೆ ಹೆಚ್ಚೇನೂ ತಿಳಿದಿರುವುದಿಲ್ಲ. ಆದ್ದರಿಂದ ಅವರ ಜೊತೆಗಿನ ಸಂಬಂಧದಲ್ಲಿ ಹಿತದ ಜೊತೆಗೆ ಒಂದಷ್ಟು ಅಹಿತವನ್ನು ಕೂಡ ಅನುಭವಿಸುತ್ತಾ ಇರುತ್ತೇವೆ. 'ಮೃತ್ಯೋರ್ಮಾ ಅಮೃತಂ ಗಮಯಾ' ಒಂದು ಸಾಮಾಜಿಕ ಪರಿವೇಷದಲ್ಲಿ ಕೆಲವು ವ್ಯಕ್ತಿಗಳ ಅಧ್ಯಯನ. ಜೊತೆಗೆ ಅವರ ಬದುಕಿನ ಚಿತ್ರಣ. ಈ ಕಾದಂಬರಿಯಲ್ಲಿ ಮೂರು ಮುಖ್ಯ ಕುಟುಂಬಗಳಿವೆ. ಅವರು ಜೀವಿಸುವ ವಿಶಾಲವಾದ ಒಂದು ಜೀವನ ಕ್ಷೇತ್ರವಿದೆ. ಅದರಲ್ಲಿ ಹಲವಾರು ವ್ಯಕ್ತಿಗಳಿದ್ದಾರೆ. ಅವರೆಲ್ಲರೂ ಈಗಲೂ ನಾವು ಕಾಣುವಂಥ ವ್ಯಕ್ತಿಗಳೇ ಆಗಿದ್ದರೆ. ಈ ಕಥೆ ಕೇವಲ ಅವರ ಭೌತಿಕ ಬದುಕಿನ ಹಿತಾಹಿತಗಳ ಕುರಿತಾಗಿಲ್ಲ. ಇದು ಅವರ ನಡೆ ನುಡಿ ವಿಚಾರ-ಅವಿಚಾರಗಳ ವಿವರ ಮತ್ತು ವಿಶ್ಲೇಷಣೆ ಕೂಡ ಆಗಿರುವಂತೆಯೇ ಪ್ರವಾಹದಂತೆ ಹರಿಯುವ ಬದುಕಿನ ಚಿತ್ರಣವೂ ಆಗಿದೆ.