Product Description
ಡಾ. ಅಂಬೇಡ್ಕರ್ರವರು ವಿಶ್ವದ ಒಬ್ಬ ಮೇರು ವ್ಯಕ್ತಿಯಾಗಿ ಬೆಳೆದು ನಿಲ್ಲಲು ಮೂಲಭೂತವಾಗಿ ಕಾರಣವಾಗಿದ್ದು ಅವರು ಗಳಿಸಿದ್ದ ಅಸಾಮಾನ್ಯ ಜ್ಞಾನ. ಡಾ. ಅಂಬೇಡ್ಕರ್ರವರು ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ತಮ್ಮ ವಿಶೇಷವಾದ ಚಾಪು ಮೂಡಿಸಿದ್ದಾರೆ. ಅಲ್ಲದೆ ಅರ್ಥಶಾಸ್ತ್ರ, ಕಾನೂನುಶಾಸ್ತ್ರ, ಸಂವಿಧಾನ, ರಾಜಕೀಯ ಶಾಸ್ತ್ರ, ಧರ್ಮಶಾಸ್ತ್ರ, ಸಮಾಜಶಾಸ್ತ್ರ, ತತ್ವಶಾಸ್ತ್ರ, ಇತಿಹಾಸ, ಪತ್ರಿಕೋದ್ಯಮ ಮುಂತಾದ ವಿಷಯಗಳಲ್ಲಿ ಅಪಾರ ಪಾಂಡಿತ್ಯ ಪಡೆದಿದ್ದರು. ಸಮುದ್ರದಲ್ಲಿ ಮುತ್ತುಗಳನ್ನು ಹುಡುಕಿ ಹೊರತೆಗೆದಂತೆ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ರವರ ಶ್ರೇಷ್ಠ ವಿಚಾರಗಳನ್ನು ಹುಡುಕಿ ಹೊರತೆಗೆದು ಅವುಗಳನ್ನು ಪುಸ್ತಕಗಳ ಮೂಲಕ ಓದುಗರ ಕೈಗಳಿಗೆ ಶ್ರೀ ಎನ್. ಆರ್. ಶಿವರಾಂರವರು ನೀಡಿದ್ದಾರೆ.
ಡಾ.ಅಂಬೇಡ್ಕರ್ರವರ ಬಗ್ಗೆ ಈಗಾಗಲೇ ಹಲವಾರು ಪುಸ್ತಕಗಳನ್ನು ಬರೆದಿರುವ ಡಾ.ಅಂಬೇಡ್ಕರ್ ಪ್ರಶಸ್ತಿ ಪುರಸ್ಕೃತರೂ, ಹಾಲಿ ಹೊಳೆನರಸೀಪುರದ ಸರ್ಕಾರಿ ಪಾಲಿಟೆಕ್ನಿಕ್ನಲ್ಲಿ ವಿಜ್ಞಾನ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುವ ಇವರು ಡಾ.ಅಂಬೇಡ್ಕರ್ರವರಿಗೆ ಪುಸ್ತಕಗಳ ಬಗ್ಗೆ ಇದ್ದ ವ್ಯಾಮೋಹ, ಪುಸ್ತಕಗಳನ್ನು ಓದುವ ಗೀಳು, ಅವರಿಗಿದ್ದ ಅಧ್ಯಯನಶೀಲತೆ, ಅವರ ಅಧ್ಯಯನ ಶೈಲಿ ಹಾಗೂ ಅವರಿಗಿದ್ದ ಅಧ್ಯಯನ ಸಾಮರ್ಥ್ಯದ ಬಗ್ಗೆ ಬೆಳಕು ಚೆಲ್ಲುವಂತ ಪ್ರಯತ್ನವನ್ನು “ಪುಸ್ತಕ ಪ್ರೇಮಿ ಡಾ. ಅಂಬೇಡ್ಕರ್” ಎಂಬ ಈ ಪುಸ್ತಕದ ಮೂಲಕ ಮಾಡಿದ್ದಾರೆ.