Product Description
ಭಾರತಕ್ಕೆ ಸ್ವಾತಂತ್ರ್ಯ ಬಂದು ಅರವತ್ನಾಲ್ಕು ವರ್ಷವಾಗಿದೆ; ಕಳೆದ ಋತುಗಳೊಂದಿಗೆ, ಬ್ರಿಟಿಷ್ ಆಳ್ವಿಕೆ ಮತ್ತು ಅದನ್ನು ಕಿತ್ತೊಗೆಯಲು ಹುಟ್ಟಿ ಬೆಳೆದ ರಾಷ್ಟ್ರೀಯ ಆಂದೋಲನದ ವ್ಯಕ್ತಿಗತ ನೆನಪುಗಳು ಸಹಜವಾಗಿಯೇ ಮಸುಕಾಗಿವೆ. ಆದರೂ ಅದರಲ್ಲಿ ಭಾಗವಹಿಸಿದವರಿಗೆ, ಜನ ತಾವೇ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವಂಥ ಭಾರತ ಹೇಗಿರುತ್ತದೆ ಎನ್ನುವುದರ ಬಗ್ಗೆ ಕಾಣ್ಕೆಗಳಿದ್ದವು; ಈ ಕಾಣ್ಕೆಗಳು ಮಾತ್ರ ತಮ್ಮ ಪ್ರಸ್ತುತತೆಯನ್ನು ಕಳೆದುಕೊಳ್ಳುವುದಿಲ್ಲ. ಈ ಹೊತ್ತಿಗೆಯಲ್ಲಿರುವ ಐದು ಪ್ರಬಂಧಗಳಲ್ಲಿ ಮೂರು ಇಬ್ಬರು ವ್ಯಕ್ತಿಗಳ ಕುರಿತಾಗಿವೆ: ಮಹಾತ್ಮಾ ಗಾಂಧೀ ಮತ್ತು ಜವಾಹರಲಾಲ್ ನೆಹರು. ಪರಸ್ಪರ ಸಾಕಷ್ಟು ವಿಭಿನ್ನವಾದ ಇವರ ವಿಚಾರಗಳು ರಾಷ್ಟ್ರೀಯ ಆಂದೋಲನವನ್ನು ಆಳ ಅಗಲಕ್ಕೆ ಆವರಿಸಿಕೊಂಡು ಅದರ ಮುನ್ನಡೆಯ ಮೇಲೆ ವಿಭಿನ್ನ ಬಗೆಯ ವಿಭಿನ್ನ ಮಟ್ಟದ ಪ್ರಭಾವವನ್ನು ಬೀರಿದ್ದವು. ನಾಲ್ಕನೆಯ ಲೇಖನ, ಹೇಗೆ ಆಲೋಚನೆ ಮತ್ತು ಆಚರಣೆಗಳ ಅಂತಃಸಂಘರ್ಷಗಳು 1930-31ರಲ್ಲಿ, ಕಾಯ್ದೆ ಭಂಗ ಚಳವಳಿಯ ಆರಂಭದ ಹೆಜ್ಜೆಗಳನ್ನು ರೂಪಿಸಿದವು ಎಂಬುದರ ಸವಿವರ ಅಧ್ಯಯನವಾಗಿದೆ. ಇದು ಕಾಂಗ್ರೆಸ್ ಸಂಘಟಿಸಿದ ಅತ್ಯಂತ ಪ್ರಬಲವಾದ ಜನಾಂದೋಲನವಾಗಿತ್ತು. ಕೊನೆಯ ಪ್ರಬಂಧದಲ್ಲಿ ರಾಷ್ಟ್ರೀಯ ಆಂದೋಲನದಲ್ಲಿ ಎಡಪಂಥದ ಕೊಡುಗೆಯ ಅಧ್ಯಯನವಿದ್ದು, ಸಾಂಪ್ರದಾಯಿಕ ಇತಿಹಾಸ ಅಧ್ಯಯನಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಕೊರತೆಗಳನ್ನು ತುಂಬುವ ಒಂದು ಪ್ರಯತ್ನ ಇದಾಗಿದೆ.