Product Description
ಭಾರತೀಯ ಸಮಾಜ ಮತ್ತು ನ್ಯಾಯ ವವಸ್ಥೆ ಹಲವು ಆತಂಕಗಳನ್ನೆದುರಿಸುತ್ತಿದೆ. ಅದರಲ್ಲೂ ನ್ಯಾಯ ವ್ಯವಸ್ಥೆಯು ವಿಳಂಬ ನ್ಯಾಯದಾನದಿಂದ ಜಡಗೊಂಡಂತೆ ಅನಿಸುತ್ತಿರುವಾಗಲೇ ಇತ್ತೀಚಿನ ದಿನಗಳಲ್ಲಿ ನ್ಯಾಯವ್ಯವಸ್ಥೆ ಮೆಜಾರಿಟೇರಿಯನ್ ಆಗುತ್ತಿದೆಯೆ ಎಂದು ಅನುಮಾನ ಬರುವಂತೆ ಆಗಿದೆ. ಕೋಮು ವಿಷಯ ಕುರಿತ ಪ್ರಕರಣಗಳಿರಲಿ ಅಥವಾ ಲೈಂಗಿಕ ದೌರ್ಜನ್ಯವಿರಲಿ-ದುರ್ಬಲನಾದವ ಕಾನೂನನ್ನು ನಂಬಿಕೊಳ್ಳುವಂತಿಲ್ಲ ಎನ್ನುವಂತಹ ಪರಿಸ್ಥಿತಿಯಿದೆ. ನ್ಯಾಯ ಕಾನೂನಿನ ಬಲದ ಮೇಲಲ್ಲ, ಕೆಸು ವಾದಿಸುವವನ ಮಾತಿನ ಬಲ ಮೇಲೆ ನಿಂತಿದೆಯೆ ಎಂಬ ಶಂಕೆ ಕಾಡುತ್ತಿದೆ.
ದಿನೇದಿನೇ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳು ದೃಶ್ಯ ಮತ್ತು ಮುದ್ರಣ ಮಾಧ್ಯಮದ ಬಹುಪಾಲು ಸ್ಪೇಸ್ಅನ್ನು ಕಬಳಿಸುತ್ತಿರುವಾಗಲೂ ಒಂದು ಪ್ರಕರಣ ಸಂಭವಿಸಿದ ಕೂಡಲೇ ಏನು ಮಾಡಬೇಕೆಂಬ ಬಗ್ಗೆ ಮಾಹಿತಿ ಇಲ್ಲದಿರುವುದನ್ನು ಗಮನಿಸಬಹುದಾಗಿದೆ. ಅಕ್ಷರಸ್ಥರಲ್ಲೂ ಸಹಾ ಕಾನೂನು ಪ್ರಕ್ರಿಯೆ ಬಗ್ಗೆ; ಪ್ರಕರಣಗಳ ನಡೆಯ ಬಗ್ಗೆ; ಅವಶ್ಯ ಕ್ರಮಗಳ ಬಗ್ಗೆ ತಿಳಿವು ಇಲ್ಲದಿರುವುದು ಕಂಡುಬರುತ್ತದೆ. ಇದನ್ನು ಗಮನಿಸಿ - ಮುಖ್ಯವಾಗಿ ವಿದ್ಯಾರ್ಥಿಗಳನ್ನೂ ಸೇರಿದಂತೆ ತರುಣ ಜನತೆಯನ್ನು ಮನದಲ್ಲಿರಿಸಿಕೊಂಡು - ಅವಶ್ಯ ಮಾಹಿತಿ ನೀಡುವ ಹೊತ್ತಗೆಯೊಂದನ್ನು ಸಿದ್ಧಪಡಿಸಲಾಗಿದೆ. ಇದರಲ್ಲಿರುವ ಮಾಹಿತಿ ಪೂರ್ಣವೆಂದಾಗಲೀ, ವ್ಯಕ್ತವಾದ ಅಭಿಪ್ರಾಯವೇ ಅಂತಿಮ ಎಂದಾಗಲೀ ಅಲ್ಲ. ಒಟ್ಟಾರೆಯಾಗಿ ಇಂದು ಸಾಮಾನ್ಯವೆಂಬಂತೆ ನಡೆಯುತ್ತಿರುವ; ಸಾಮಾನ್ಯವೆಂಬಂತೆ ಜನ ಮರೆತುಬಿಡುತ್ತಿರುವ ಅತ್ಯಾಚಾರ ಪ್ರಕರಣಗಳ ಕುರಿತು; ಅದರ ಕಾನೂನು ಅಂಶಗಳ ಕುರಿತು ಹಲವು ನೆಲೆಗಳ ಚರ್ಚೆಯನ್ನೆತ್ತಿಕೊಂಡಿದೆ. ಬರಲಿರುವ ಪೀಳಿಗೆಯು ಸೂಕ್ತ ಕಾನೂನು ಜ್ಞಾನವನ್ನೂ ಲಿಂಗಸೂಕ್ಷ್ಮತೆಯನ್ನೂ ಪಡೆಯಲಿ ಎಂಬ ಆಶಯದಿಂದ ಸುಲಭ ದರದಲ್ಲಿ ಎಟುಕುವಂತೆ ರೂಪಿಸಲಾಗಿದೆ.