Product Description
ಜನಸಾಮಾನ್ಯರಿಂದ ಗಗನಗಾಮಿಗಳವರೆಗೆ ಇಂದು ಎಲ್ಲ ಜನವರ್ಗಗಳನ್ನೂ ಯೋಗ ಆಕರ್ಷಿಸಿದೆ. ಹಿಂದೆ ಭಾರತದಲ್ಲಷ್ಟೆ ಪ್ರಚಲಿತವಾಗಿದ್ದ ಯೋಗ ಇಂದು ಜಗತ್ತಿನ ವಿವಿಧ ದೇಶಗಳಲ್ಲಿ ಹರಡಿ ಮಾನ್ಯತೆ ಪಡೆದುಕೊಂಡಿದೆ. ಯೋಗಾಭ್ಯಾಸ ಶರೀರದ ಆರೋಗ್ಯಕ್ಕೆ ಸಾಧನವಾಗಿರುವುದು ಮಾತ್ರವಲ್ಲದೆ ಮಾನಸಿಕ ಸ್ವಾಸ್ಥ್ಯ, ಬುದ್ಧಿಯ ಪ್ರಖರತೆ, ಆಧ್ಯಾತ್ಮಿಕ ಪ್ರಗತಿಗಳಿಗೂ ದಾಗಿ ಮಾಡುತ್ತದೆಂಬುದು ಹೆಚ್ಚು ಹೆಚ್ಚು ಮಂದಿಗೆ ಈಗ ಮನವರಿಕೆಯಾಗತೊಡಗಿದೆ. ಆರೋಗ್ಯ ರಕ್ಷಣೆಯಲ್ಲಷ್ಟೆ ಅಲ್ಲದೆ ಹಲವಾರು ರೋಗಗಳ ಚಿಕಿತ್ಸೆಯಲ್ಲಿಯೂ ಯೋಗಾಭ್ಯಾಸ ಪರಿಣಾಮಕಾರಿ ಪಾತ್ರ ವಹಿಸಬಲ್ಲದೆಂಬುದನ್ನು ಇತ್ತೀಚಿನ ವೈದ್ಯಶಾಸ್ತ್ರಸಮ್ಮತ ಪ್ರಯೋಗ ಪರೀಕ್ಷೆಗಳೂ ಸ್ಥಿರೀಕರಿಸಿವೆ.
ಇತರ ಭಾರತೀಯ ಶಾಸ್ತ್ರ-ಕಲೆಗಳಂತೆ ಯೋಗಾಸನದ ಸೂಕ್ಷ್ಮಾಂಶಗಳೂ ಗುರುಗಳ ಮೂಲಕವೇ ತಿಳಿಯುವಂಥವು. ಯೋಗಾಸನವೆಂದರೆ ಕೇವಲ ಕೆಲವು ವಿಶಿಷ್ಟ ಅಂಗಾಂಗ ಚಾಲನೆಗಳಲ್ಲ. ಯೋಗಾಸನದ ಪೂರ್ಣ ಪ್ರಯೋಜನ ದೊರೆಯಬೇಕಾದರೆ ಪ್ರತಿಯೊಂದು ಆಸನವನ್ನೊಡಗೂಡಿದ ಉಚ್ಛ್ವಾಸ-ನಿಃಶ್ವಾಸ ಕ್ರಿಯೆ, ಆಸನಗಳ ಅನುಕ್ರಮ, ವಿಶಿಷ್ಟ ಶರೀರ ಧರ್ಮಗಳಿಗೆ ಹೊಂದುವ ಆಸನ ಆಯ್ಕೆ - ಇತ್ಯಾದಿ ನಾಲ್ಕಾರು ಅಂಶಗಳ ಪರಿಜ್ಞಾನ ಅಗತ್ಯವಾಗುತ್ತದೆ. ಪ್ರತಿಯೊಂದು ಆಸನದ ವಿನ್ಯಾಸವನ್ನು ತಿಳಿಸುವುದರ ಜೊತೆಗೆ, ಸಾಧಕರಿಗೆ ಅತ್ಯವಶ್ಯವಾದ ಮತ್ತು ಒಂದೊಂದು ಆಸನಕ್ಕೆ ಸಂಬಂಧಿಸಿದ ವಿಶೇಷ ಪ್ರಕ್ರಿಯೆಗಳಿಗೂ ಶರೀರಶಾಸ್ತ್ರ ವಿವರಗಳಿಗೂ ಗಮನ ನೀಡಿದೆ ‘ಯೋಗಪ್ರವೇಶ’.