Product Description
‘ವಿಶ್ವಕಥಾಕೋಶದ’ ಇಪ್ಪತ್ತೈದು ಸಂಪುಟಗಳು ಎರಡೂವರೆ ವರ್ಷಗಳ ಅವಧಿಯಲ್ಲಿ ಆರು ಕಂತುಗಳಾಗಿ ಪ್ರಕಟವಾಗಿ ಮೂವತ್ತು ವರ್ಷಗಳೇ ಕಳೆದಿವೆ (1980 ಯುಗಾಗಿ-1982 ದೀಪಾವಳಿ). ಅವುಗಳ ಮರುಮುದ್ರಣಗಳು ಕಳೆದ ಎರಡು ವರ್ಷಗಳಲ್ಲಿ ಪ್ರಕಟವಾದುವು (2011-2012). ಈಗ ಕಥಾಕೋಶದ ಪ್ರಸ್ತಾವನೆಗಳು ‘ವಿಶ್ವ ಕಥಾವಾಹಿನಿ’ ಹೆಸರಿನಲ್ಲಿ ಪ್ರಕಟವಾಗಿದೆ. ‘ವಿಶ್ವ ಕಥಾವಾಹಿನಿ’ಯ ಪ್ರಸ್ತಾವನೆಗಳನ್ನು ಓದಿದರೂ ಸಾಕು, ಒಂದು ವಿಷಯ ಮನದಟ್ಟಾಗುತ್ತದೆ, ಜಗತ್ತಿನ ಚರಿತ್ರೆ ಎಂದರೆ ರಾಜರ ಕಥೆಯಲ್ಲ, ಜನಸಮುದಾಯದ್ದು. ಅವರ ನೋವು, ಅನ್ಯಾಯ, ಹಿಂಸೆ, ಗೊಂದಲ, ಹೋರಾಟಗಳೇ ವಾಸ್ತವ ಚರಿತ್ರೆಯ ತುಂಬ ಆಯಾ ಕಾಲದ, ಸಮಾಜದ, ದೇಶದವರಿಗೆ ಇತಿಹಾಸದ ತುಣುಕು ಮಾತ್ರ ಗ್ರಹಿಕೆಗೆ ದಕ್ಕಬಹುದು. ಕಥಾಕೋಶ ಒಳಗೊಂಡಿರುವ ದೇಶ, ರಾಷ್ಟ್ರ, ಸಮಾಜ, ಭಾಷೆಗಳ ವ್ಯಾಪ್ತಿ ಗಮನಿಸಿದಾಗ ಪ್ರಸ್ತಾವನೆಯ ಅಗತ್ಯದ ಮಹತ್ವ ಅರಿವಾಗುತ್ತದೆ. ಇಂಗ್ಲಿಷ್ ಸಾಹಿತ್ಯ ನಮಗೆ ಪರಿಚಿತ. ಹಾಗೇ ಅಲ್ಪಸ್ವಲ್ಪ ಯೂರೋಪ್ ಮತ್ತು ರಷ್ಯಾ ಸಾಹಿತ್ಯ. ಆದರೆ ಆಫ್ರಿಕಾದ ಅನೇಕ ರಾಷ್ಟ್ರಗಳ ಭಾಷೆ, ಸಾಹಿತ್ಯ, ಭೂಗೋಳ, ನಿಸರ್ಗ, ಸಮಾಜ, ಇತಿಹಾಸಗಳ ಬಗ್ಗೆ ಎಷ್ಟು ತಿಳಿವಳಿಕೆ ಇದೆ? ಇತ್ತೀಚೆಗೆ ದಕ್ಷಿಣ ಅಮೆರಿಕ ಗಮನ ಸೆಳೆಯುತ್ತಿದೆ. ಆದರೆ ಪೂರ್ವ ದೇಶಗಳು ಇಂದಿಗೂ ದೂರವೇ. ಪ್ರಸ್ತಾವನೆಯ ಓದಿನಿಂದಲೇ ಅವುಗಳ ಬಗ್ಗೆ ಒಂದು ಕಲ್ಪನೆ ಮೂಡುತ್ತದೆ. ಮಾತ್ರವಲ್ಲ, ಜೊತೆಗೆ, ಮೂಲಕಥೆಗಳನ್ನು ಓದುವ ಹಂಬಲ ಉಂಟಾಗುತ್ತದೆ. ‘ವಿಶ್ವ ಕಥಾವಾಹಿನಿ’ಯನ್ನು ಒಮ್ಮೆ ಓದಿ ಮುಗಿಸಿದ ಮೇಲೆ ಜಗತ್ತಿನ ಇತಿಹಾಸವನ್ನು ಹಾಯ್ದು ಬಂದ ಅನುಭವ. ಯಾರಿಗಾದರೂ ಹಾಗೇ ಎನಿಸೀತು.